
ಬಂಟ್ವಾಳ, ಡಿ.17 : ಗಣಿಗಾರಿಕೆಂದು ಬಳಸಿದ ಸ್ಫೋಟಕಗಳಿಂದಾಗಿ ಬಂಡೆ ಚೂರುಗಳು ಸಿಡಿದು ಮನೆಗಳು ಹಾಗೂ ನಿಲ್ಲಿಸಿದ ವಾಹನಗಳಿಗೆ ಹಾನಿಯಾಗಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಆತಂಕಗೊಂಡಿರುವ ಗ್ರಾಮಸ್ಥರು ಬುಧವಾರ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲ ಮೂಡ್ನೂರು ಗ್ರಾಮದ ಮಾಡತ್ತಡ್ಕ ಬೋಳಿಗದ್ದೆ ಎಂಬಲ್ಲಿ ಕರಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಮಂಗಳವಾರ ಸಂಜೆ ಇಲ್ಲಿನ ಕ್ರಷರ್‍ನಲ್ಲಿ ಗಣಿಗಾರಿಕೆಯ ಸಂದರ್ಭ ಸ್ಫೋಟಕ ಬಳಕೆ ಮಾಡಲಾಗಿತ್ತು. ಈ ಸಂದರ್ಭ ಸಿಡಿದ ಕಲ್ಲು, ಸ್ಥಳೀಯ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಮನೆಗೆ ತಗುಲಿ ಹಾನಿಯಾಗಿದ್ದರೆ, ಇದೇ ಪರಿಸರದಲ್ಲಿನ ನಿವಾಸಿ ವಿನಯ್ ಎಂಬವರಿಗೆ ಸೇರಿದ ವಾಹನದ ಗಾಜುಗಳು ಪುಡಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಡುಗುತ್ತಿದೆ ಭೂಮಿ:
ಈ ಭಾಗದಲ್ಲಿ ಸುಮಾರು 10ಕ್ಕಿಂತಲೂ ಅಧಿಕ ಕರಿಕಲ್ಲಿನ ಕೋರೆಗಳು ಕಾರ್ಯಾಚರಿಸುತ್ತಿವೆ. ಇಲ್ಲಿ ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ಸಿಡಿಸುವ ವೇಳೆ ಭೂಮಿಯಲ್ಲಿ ನಡುಕ ಉಂಟಾಗಿ ಮನೆಗಳಲ್ಲಿ ಬಿರುಕು ಕಾಣಿಸಲು ಆರಂಭವಾಗಿದೆ. ಈ ಪ್ರದೇಶದಲ್ಲಿರುವ ಮನೆಗಳು ನಿತ್ಯವೂ ಆತಂಕ ಎದುರಿಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೋರೆ ಲಾರಿಗಳ ಅಬ್ಬರಕ್ಕೆ ರಸ್ತೆಗಳು ದುಸ್ಥಿತಿಗೆ :
ಕ್ರೆಷರ್ ಜಲ್ಲಿ ಸಾಗಾಟಕ್ಕೆ ಅರುವ ಬಾರೀ ಗಾತ್ರ ಲಾರಿಗಳ ಸಂಚಾರಕ್ಕೆ ಚಂದಳಿಕೆ ಮಾಡತ್ತಡ್ಕ ಅಜ್ಜಿನಡ್ಕ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ರಸ್ತೆ ಸಂಪೂರ್ಣ ದುಸ್ಥಿತಿಗೆ ಹೋಗಿದೆ. ಲಾರಿಗಳ ಸಂಚಾರಕ್ಕೆ ಬೇಕಾದ ರೀತಿಯಲ್ಲಿ ರಸ್ತೆಯನ್ನು ನಿರ್ಮಿಸದಿರುವುದರಿಂದ ರಸ್ತೆಯ ಡಾಂಬರನ್ನು ಹುಡುಕುಬೇಕಾದ ಸ್ಥಿತಿ ಇದೆ. ನಿತ್ಯ ಈ ಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ವಿಟ್ಲ, ಪುತ್ತೂರು ಶಾಲೆ ಕಾಲೇಜಿಗೆ ಹೋಗುತ್ತಿದ್ದು, ಲಾರಿಗಳ ಓಡಾಟದಿಂದ ಏಳುವ ದೂಳಿನಲ್ಲೇ ಸಂಚರಿಸಬೇಕಾಗಿದೆ. ಕೆಲವೊಂದು ಕಡೆಯಲ್ಲಿ ಲಾರಿಗಳು ಬಂದರೆ ವಿದ್ಯಾರ್ಥಿಗಳಿಗೆ ನಿಲ್ಲಲೂ ಜಾಗವಿಲ್ಲದ ಪರಿಸ್ಥಿತಿ ಇದೆ ಹಾಗೂ ನಡೆಯಲೂ ಅಸಾಧ್ಯವಾದ ರಸ್ತೆಯಾಗಿ ಮಾರ್ಪಾಡಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.