ಕನ್ನಡ ವಾರ್ತೆಗಳು

ಉಡುಪಿಯ ಕಾಪುವಿನಲ್ಲಿ ನಡೆಯಲಿದೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ; ಸಂಭ್ರಮಕ್ಕೆ ಸಿದ್ಧತೆ

Pinterest LinkedIn Tumblr

ಉಡುಪಿ: ಕಾಪುವಿನ ವಿದ್ಯಾನಿಕೇತನಾ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯನ್ನು ಸುವ್ಯವಸ್ಥಿತವಾಗಿ ಆಯೋಜಿಸುವ ಸಂಬಂಧ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಅವರ ಅಧ್ಯಕ್ಷತೆಯಲ್ಲಿ ಇಂದು ಕಾಪು ವಿದ್ಯಾನಿಕೇತನ ಸಂಸ್ಥೆಯಲ್ಲಿ ಸಭೆ ನಡೆಯಿತು.

ರಾಜ್ಯ ಮಟ್ಟದ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಡಿಸೆಂಬರ್ 15,16 ಮತ್ತು 17ರಂದು ಮೂರು ದಿನಗಳ ಕಾಲ ನಡೆಯಲಿದೆ. ಈ ಸಂಬಂಧ 55 ಲಕ್ಷ ರೂ.ಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಇನ್ನು 10 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಕೇಳಲು ಸಭೆಯಲ್ಲಿ ನಿರ್ಧರಿಸಲಾಯಿತು.

Statelevel_Pratibha karanji_Udp (1) Statelevel_Pratibha karanji_Udp (2) Statelevel_Pratibha karanji_Udp (3)

ಕಾರ್ಯಕ್ರಮದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ 2210 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. 25 ವೈಯಕ್ತಿಕ ವಿಭಾಗ ಹಾಗೂ 6 ಸಾಮೂಹಿಕ ವಿಭಾಗದ ಸ್ಪರ್ಧೆಗಳು ನಡೆಯುತ್ತವೆ.
ಈ ಸಂಬಂಧ ನಡೆದ ಮೂರನೇ ಪೂರ್ವಭಾವಿ ಸಭೆ ಇದಾಗಿದ್ದು, 13 ವಿವಿಧ ಸಮಿತಿಗಳು ಯಶಸ್ವಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆಗಳನ್ನು ನಡೆಸುತ್ತಿದೆ. ವಸತಿ, ಊಟ, ಉಪಹಾರ, ಶುದ್ಧ ಕುಡಿಯುವ ನೀರು, ಸಾರಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕಾರ್ಯಕ್ರಮ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ವತಿಯಿಂದ ಆಯೋಜಿಸಲಾಗಿದೆ.
15ರಂದು ಅಪರಾಹ್ನ 2 ಗಂಟೆಗೆ ಸಂಭ್ರಮದ ಮೆರವಣಿಗೆ ದಂಡತೀರ್ಥದಿಂದ ವಿದ್ಯಾನಿಕೇತನಾ ಶಾಲೆಯವರೆಗೆ ನಡೆಯಲಿದೆ.

ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಮೂಹಿಕ ಸ್ಪರ್ಧಾ ವಿಷಯಗಳು ಜಾನಪದ ನೃತ್ಯ, ದೇಶಭಕ್ತಿ ಗೀತೆ, ಕೋಲಾಟ, ಕ್ವಿಜ್ (ಸಾಮಾನ್ಯ ವಿಷಯದಲ್ಲಿ ಒಂದು ಶಾಲೆಯಿಂದ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಭಾಗವಹಿಸುವುದು).

ಪ್ರೌಢಶಾಲಾ ವಿಭಾಗದಲ್ಲಿ ವೈಯಕ್ತಿಕ ಸ್ಪರ್ಧಾ ವಿಷಯಗಳು: ಭಾಷಣ (ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಉರ್ದು, ಮರಾಠಿ, ತೆಲುಗು, ತಮಿಳು, ತುಳು, ಕೊಂಕಣಿ), ಧರ್ಮಿಕ ಪಠನ – ಸಂಸ್ಕೃತ ಮತ್ತು ಅರೇಬಿಕ್, ಯೋಗಾಸನಾ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಛದ್ಮವೇಷ, ಕ್ಲೇ ಮಡಲಿಂಗ್, ಆಶುಭಾಷಣ ಸ್ಪರ್ಧೆ, ಮಿಮಿಕ್ರಿ, ಪ್ರಬಂಧ ರಚನೆ, ಚರ್ಚಾ ಸ್ಪರ್ಧೆ, ಚಿತ್ರಕಲೆ, ರಂಗೋಲಿ, ಗಝಲ್,
ಸಾಮೂಹಿಕ ಸ್ಪರ್ಧಾ ವಿಷಯಗಳು: ನಾಟಕ, ಕ್ವಿಜ್, ಕವ್ವಾಲಿ, ಜಾನಪದ ನೃತ್ಯ, ಕೋಲಾಟ, ಸ್ಥಳದಲ್ಲಿ ವಿಜ್ಞಾನ ಮಾದರಿ ತಯಾರಿ.

ಸಭೆಯಲ್ಲಿ ಪ್ರೌಢಶಿಕ್ಷಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಫಿಲೋಮಿನಾ ಲೋಬೋ ಮತ್ತು ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥರಾದ ಕೆ ಪಿ ಆಚಾರ್ಯ, ವಿದ್ಯಾಂಗ ಉಪನಿರ್ದೇಶಕರಾದ ದಿವಾಕರ ಶೆಟ್ಟಿ, ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಲೋಗೋ ಬಿಡುಗಡೆ ಮಾಡಲಾಯಿತು.

Write A Comment