ಕನ್ನಡ ವಾರ್ತೆಗಳು

ಲಾರಿ- ಬೈಕ್ ಪರಸ್ಪರ ಡಿಕ್ಕಿ: ಬೈಕ್ ಸವಾರ ಸಾವು

Pinterest LinkedIn Tumblr

baik_lari_acdent

ವಿಟ್ಲ, ಡಿ.07:  ಕೋಡಪದವು ಗ್ರಾಮದ ಬಳಿ ಬುಲೆಟ್ ಬೈಕ್ ಮತ್ತು ಮಿನಿ ಲಾರಿ ಪರಸ್ಪರ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ವಿಟ್ಲ ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಮೃತ ಪಟ್ಟವರನ್ನು ವಿಟ್ಲ ಪಡ್ನೂರು ಗ್ರಾಮದ ಪಂಜಿಗದ್ದೆ ನಿವಾಸಿ ಅಶೋಕ್ ಕುಮಾರ್ (50) ಎಂದು ಗುರುತಿಸಲಾಗಿದೆ, ರಾಸಾಯನಿಕ ಗೊಬ್ಬರಗಳ ಮಾರಾಟ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.

ಇಂದು ಬೆಳಿಗ್ಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಮಗಳನ್ನು ತನ್ನ ಬುಲೆಟ್ ಬೈಕ್ ನಲ್ಲಿ ಕರೆದೊಯ್ದು ವಿಟ್ಲ- ಮಂಗಳೂರು ರಸ್ತೆಯ ವೀರಕಂಬ ಸಮೀಪದ ಮಜಿಓಣಿ ಎಂಬಲ್ಲಿಯ ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳುತ್ತಿದ್ದರು. 9 ಗಂಟೆಯ ಸುಮಾರಿಗೆ ಕೋಡಪದವು ಗ್ರಾಮದ ಸರವು ಎಂಬಲ್ಲಿ ತಲುಪುತ್ತಿದ್ದಂತೆ ತಿರುವು ರಸ್ತೆ ಯಲ್ಲಿ ಬೈಕ್ ಮತ್ತು ಮಿನಿಲಾರಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಪರಿಣಾಮ ಬೈಕ್ ಸಹಿತ ರಸ್ತೆಗೆಸೆಯಲ್ಪಟ್ಟ ಆಶೋಕ ಕುಮಾರ್ ಸ್ಥಳದಲ್ಲಿಯೇ ದಾರುಣ ಸಾವನ್ನಪ್ಪಿದ್ದಾರೆ. ಮಿನಿಲಾರಿ ಮೃತ ಅಶೋಕ್ ಕುಮಾರ್ ಸಂಬಂಧಿಯೆನ್ನಲಾದ ರಮೇಶ್ ಭಟ್ ಎನ್ನುವವರಿಗೆ ಸೇರಿದ್ದಾಗಿದ್ದು ಅವರೇ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಶೋಕ್ ಕುಮಾರ್ ಅವರ ಮನೆಯಲ್ಲಿ ನಿನ್ನೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಇಂದೂ ಈ ಕಾರ್ಯಕ್ರಮಗಳು ಮುಂದುವರಿಯಲಿದ್ದರಿಂದ ಕಾಲೇಜಿಗೆ ಹೋಗುವ ಮಗಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ತಕ್ಷಣ ಮನೆಗೆ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ವಿಟ್ಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ

Write A Comment