ಕನ್ನಡ ವಾರ್ತೆಗಳು

ವಿಧಾನಪರಿಷತ್ ಚುನಾವಣೆ: ಬಿಜೆಪಿಯಿಂದ ಕೋಟ, ಗೊಂದಲದಲ್ಲಿ ಕಾಂಗ್ರೆಸ್- ಜೆ.ಪಿ. ಹೆಗ್ಡೆ ಪಕ್ಷೇತರ ಸ್ಪರ್ಧೆ..?

Pinterest LinkedIn Tumblr

ಉಡುಪಿ: ರಾಜ್ಯದ ವಿಧಾನಪರಿಷತ್ ಚುನಾವಣೆಯ ಅಧಿಕೃತ ಘೋಷಣೆ ಹೊರ ಬೀಳುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಕೆದರಿದೆ. ಈ ಬಾರಿಯ ಅಭ್ಯರ್ಥಿಗಳು ಯಾರಾಗ ಬಹುದು ಎನ್ನುವ ಅಂತೆ-ಕಂತೆಗಳು ಸಾಮಾಜಿಕ ಜಾಲ ತಾಣಗಳ ಮೂಲಕ ಹರಿದಾಡುತ್ತಿದೆ.

ಅವಿಭಜಿತ ದ.ಕ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಸ್ಥಳೀಯ ಸಂಸ್ಥೆಗಳ ದ.ಕ ಕ್ಷೇತ್ರವನ್ನು ಈ ಹಿಂದಿನಿಂದಲೂ ಇಬ್ಬರು ಪ್ರತಿನಿಧಿಗಳು ಪ್ರತಿನಿಧಿಸುತ್ತಿದ್ದರು. ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಏನೇ ಇದ್ದರೂ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ತಲಾ ಒಂದು ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಪರಿಷತ್‌ಗೆ ತಮ್ಮ ಪ್ರತಿನಿಧಿಗಳನ್ನಾಗಿ ಕಳುಹಿಸುವ ಸಂಪ್ರದಾಯಗಳು ಈ ಹಿಂದೆಯೇ ಪ್ರಾರಂಭವಾಗಿತ್ತು. ಇದರ ಫಲಶ್ರುತಿ ಎಂಬಂತೆ ಕಳೆದ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಬಿಜೆಪಿ ಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರೋಧವಾಗಿ ಆಯ್ಕೆಯಾಗಿದ್ದರು.

Kota_Shrinivas_Poojary

ಬಿಜೆಪಿಯಿಂದ ಕೋಟ ಶ್ರೀನಿವಾಸ್ ಪೂಜಾರಿ:
ವಿಧಾನಪರಿಷತ್ ಆಯ್ಕೆಯೊಂದಿಗೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶವನ್ನು ಪಡೆದುಕೊಂಡಿದ್ದ ಶ್ರೀನಿವಾಸ ಪೂಜಾರಿಯವರು ಪ್ರಸ್ತುತ ಬಿಜೆಪಿ ಯ ರಾಜ್ಯ ಹಿಂದುಳಿದ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯ ಮುಂಚೂಣಿಯ ಸ್ಥಾನದಲ್ಲಿ ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಬಹುತೇಕ ಪಕ್ಷದ ಅಭ್ಯರ್ಥಿ ಅವರೇ ಆಗಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಅಧ್ಯಕ್ಷ ಉದಯ್‌ಕುಮಾರ ಶೆಟ್ಟಿ, ಮೋನಪ್ಪ ಭಂಡಾರಿ, ಪ್ರತಾಪ್‌ಸಿಂಹ ನಾಯಕ್ ಮುಂತಾದವರ ಹೆಸರುಗಳು ಚಾಲ್ತಿಗೆ ಬಂದಿದ್ದರೂ, ಪೂಜಾರಿಯವರ ಆಯ್ಕೆಗೆ ಹೆಚ್ಚು ಒಲವು ವ್ಯಕ್ತವಾಗಿದ್ದಲ್ಲದೇ ಅವರಿಗೆ ಸೀಟು ನೀಡಲಾಗಿತ್ತು.

Vidhanaparishat_Election_2015

(ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಕೆ.ಜಯಪ್ರಕಾಶ್ ಹೆಗ್ಡೆ)

ಕಾಂಗ್ರೆಸ್ ಪಕ್ಷದಲ್ಲಿ ಸೀಟು ಗೊಂದಲ: ಕಾಂಗ್ರೆಸ್‌ನ ಹಾಲಿ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರು ಕಳೆದ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ತಾನು ಈ ಬಾರಿಯ ಸ್ಪರ್ಧೆಗೆ ಉತ್ಸುಕನಲ್ಲ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಪಂಚಾಯತ್ ಪ್ರತಿನಿಧಿಗಳಿಗೆ ರವಾನಿಸಿದ್ದರು. ಈ ಬೆಳವಣಿಗೆ ಬೆಳಕಿಗೆ ಬರುತ್ತಿದ್ದಂತೆ ಅವರ ಬೆಂಬಲಿಗರಲ್ಲಿ ಸಂಚಲನ ಉಂಟಾಗಿತ್ತು. ಪಕ್ಷದ ಹಿರಿಯ ಹಾಗೂ ನಿಷ್ಕಳಂಕ ಚಾರಿತ್ರ್ಯದ ನಾಯಕರಾದ ನೀವು ಚುನಾವಣೆಗೆ ನಿಲ್ಲಬೇಕು ಎನ್ನುವ ಒತ್ತಡಗಳು ಪ್ರಾರಂಭವಾಗಿದ್ದವು. ಸಾವಿರಾರು ಜನರು ಒಟ್ಟಾಗಿ ಅವರ ಮನೆಗೆ ತೆರಳಿ ಅವರ ಮನವೂಲಿಸುವ ಪ್ರಯತ್ನವನ್ನು ಮಾಡಿದ್ದರು. ಇದಾವೂದಕ್ಕು ಜಗ್ಗದ ಪ್ರತಾಪ್ ತನ್ನ ತೀರ್ಮಾನವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದ್ದರು.

ಈ ಎಲ್ಲ ಬೆಳವಣಿಗೆಗಳು ಪಕ್ಷದ ವಲಯದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿ ಪರಿಸ್ಥಿತಿ ತಿಳಿಗೊಳಿಸಲು ಹಿರಿಯ ನಾಯಕರು ಪ್ರಯತ್ನಿಸಿದ್ದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಚಿವ ವಿನಯ್‌ಕುಮಾರ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿ ಸೇರಿದಂತೆ ಹಲವರು ಪ್ರತಾಪ್‌ಚಂದ್ರ ಶೆಟ್ಟಿಯವರೊಂದಿಗೆ ಮಾತುಕತೆಯನ್ನು ನಡೆಸಿದ್ದರು. ಅವಿಭಜಿತ ದ.ಕ ಜಿಲ್ಲೆಯ ಜನಪ್ರತಿನಿಧಿಗಳು ಒಟ್ಟಾಗಿ ಮುಖ್ಯಮಂತ್ರಿಗಳನ್ನ ಹಾಗೂ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಕಾರ್ಯಕರ್ತರ ಆಗ್ರಹವನ್ನು ಅವರುಗಳಿಗೆ ಮುಟ್ಟಿಸುವ ಪ್ರಯತ್ನವನ್ನು ಮಾಡಿದ್ದಾರೆ.

6 ಅವಧಿಯ ಶಾಸಕರಾಗಿರುವ ಪ್ರತಾಪ್ ಅವರೊಂದಿಗೆ ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ತಮ್ಮ ನಾಯಕ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ತೀರ್ಮಾನ ಮಾಡಿದ್ದಲ್ಲಿ, ತಾವೆಲ್ಲ ರಾಜಕೀಯದಿಂದಲೇ ವಿಮುಖರಾಗುತ್ತೇವೆ ಎನ್ನುವ ಭಾವನಾತ್ಮಕ ಸಂದೇಶಗಳು ಅವರನ್ನು ತಲುಪಿದೆ. ಪಕ್ಷದ ಹಿರಿಯರ ಅಭಿಪ್ರಾಯಗಳಿಗೆ ಹಾಗೂ ಕಾರ್ಯಕರ್ತರ ವಿಶ್ವಾಸಗಳಿಗೆ ಪ್ರತಾಪ್ ಒಪ್ಪಿಕೊಂಡಲ್ಲಿ ಪಕ್ಷದ ಅಭ್ಯರ್ಥಿ ಅವರೇ ಎನ್ನುವ ಬಲವಾದ ನಂಬಿಕೆ ಕಾಂಗ್ರೆಸ್ ವಲಯದಲ್ಲಿ ಇದೆ.

ಮಾಜಿ ಶಾಸಕ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಗೋಪಾಲ ಭಂಡಾರಿ, ಎಂ.ಎ ಗಫೂರ್, ಹರಿಕೃಷ್ಣ ಬಂಟ್ವಾಳ್, ಪಿ.ವಿ ಮೋಹನ್, ಭುಜಂಗ ಶೆಟ್ಟಿ, ಎಸ್.ರಾಜೂ ಪೂಜಾರಿ ಸೇರಿದಂತೆ ಸ್ಪರ್ಧಾ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ಕಾಂಗ್ರೆಸ್ ಅಂತಿಮ ಪಟ್ಟಿ ಹೈಕಮಾಂಡ್ ತಲುಪಿದ್ದು ಅದರಲ್ಲಿ ಯಾರಿಗೆ ಸೀಟು ನೀಡಲಾಗುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಒಂದೊಮ್ಮೆ ಹಿರಿಯ ರಾಜಕಾರಣಿ ಮಾಜಿ ಶಾಸಕರಿಗೆ ಸೀಟು ಸಿಗದಪಕ್ಷದಲ್ಲಿ ಅವರು ಪಕ್ಷೇತರವಾಗಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ರಜಕೀಯ ವಲಯದಿಂದ ಕೇಳಿಬರುತ್ತಿದೆ.

Write A Comment