ಕನ್ನಡ ವಾರ್ತೆಗಳು

ದ.ಕ ಜಿಲ್ಲೆ ಹೆರಿಗೆ ಸಾವು ಪ್ರಕರಣಗಳಿಗೆ ಸಂಬಂಧಪಟ್ಟ ಆಸ್ಪತ್ರೆಗಳಿಗೆ ನೋಟಿಸ್ ಜಾರಿ : ಜಿಲ್ಲಾಧಿಕಾರಿ ಸೂಚನೆ.

Pinterest LinkedIn Tumblr

Dc_meet_photo_1

ಮಂಗಳೂರು, ಡಿ.01 : ದ.ಕ. ಜಿಲ್ಲೆಯ ಕೆಲ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯ ವೇಳೆ ವೈದ್ಯರ ನಿರ್ಲಕ್ಷ ಸೇರಿದಂತೆ ವಿವಿಧ ರೀತಿಗಳಲ್ಲಿ ಸಂಭವಿಸಿದ ಹೆರಿಗೆ ಸಾವು ಪ್ರಕರಣಗಳಿಗೆ ಸಂಬಂಧಪಟ್ಟ ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸೂಚನೆ ನೀಡಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಆರೋಗ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲಾಮಟ್ಟದ ರಾಷ್ಟ್ರೀಯ ಆರೋಗ್ಯ ಮಿಶನ್ ಸಭೆಯಲ್ಲಿ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ನಡೆದಿರುವ 12 ಹೆರಿಗೆ ಸಾವು ಪ್ರಕರಣಗಳಿಗೆ ಸಂಬಂಧಿಸಿ ನಡೆದ ತನಿಖಾ ವರದಿಯನ್ನು ಆಲಿಸಿದ ಜಿಲ್ಲಾಧಿಕಾರಿ, ಹೆರಿಗೆ ಸಾವಿನ ಹಲವು ಪ್ರಕರಣಗಳಲ್ಲಿ ಲೇಡಿಗೋಶನ್ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿನ ನಿರ್ಲಕ್ಷ ಗೋಚರಿಸಿದೆ. ಈ ಬಗ್ಗೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹೆರಿಗೆ ಸಾವಿನ ಕುರಿತಂತೆ ಇಲಾಖೆಯ ಅಧಿಕಾರಿಗಳು ನಡೆಸಿರುವ ತನಿಖಾ ವರದಿಯ ಪ್ರತಿಯನ್ನು ಸಾವಿಗೀಡಾದ ಮಹಿಳೆಯರ ಕುಟುಂಬಕ್ಕೆ ನೀಡುವಂತೆಯೂ ಜಿಲ್ಲಾಧಿಕಾರಿ ತಿಳಿಸಿದರು.

Dc_meet_photo_3 Dc_meet_photo_2

ದ.ಕ. ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿದೇವಿ ಮಾತನಾಡಿ, ಹೆರಿಗೆ ಸಾವಿಗೆ ಸಂಬಂಧಿಸಿ 12 ಪ್ರಕರಣಗಳಲ್ಲಿ ಸಮಿತಿ ರಚಿಸಿ ತನಿಖೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹಾಗೂ ಸೂಕ್ತ ವಿದ್ಯಾರ್ಹತೆ ಹೊಂದಿರುವ ದಾದಿಯರ ಕೊರತೆ ಕಂಡುಬಂದಿದೆ. ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ ಎಂದು ತನಿಖಾ ವರದಿಯನ್ನು ಉಲ್ಲೇಖಿಸಿ ಹೇಳಿದರು.

ದ.ಕ. ಜಿಪಂ ಸಿಇಒ ಶ್ರೀವಿದ್ಯಾ ಮಾತನಾಡಿ, ಹೆರಿಗೆ ಸಾವಿಗೆ ಒಳಗಾದ ಬಹುತೇಕ ಮಹಿಳೆಯರು ಬಿಪಿಎಲ್ ಕುಟುಂಬದವರಾದ ಹಿನ್ನೆಲೆಯಲ್ಲಿ ಮುಂದಿನ ದಿನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮೂಲಕ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಗರ್ಭಿಣಿ ಮಹಿಳೆಯರ ಜೊತೆ ಸಮಾಲೋಚನೆ ನಡೆಸುವ ಹಾಗೂ ನಿರಂತರ ತಪಾಸಣೆ ಹಾಗೂ ಸೂಕ್ತ ಮಾಹಿತಿಯನ್ನು ಒದಗಿಸಲು ಸೂಚಿಸಬೇಕು ಎಂದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ಎಪ್ರಿಲ್‌ನಿಂದ ನವೆಂಬರ್‌ವರೆಗೆ ಒಟ್ಟು 15 ಹೆರಿಗೆ ಸಾವು ಪ್ರಕರಣಗಳು ಸಂಭವಿಸಿವೆ. ಪ್ರಸಕ್ತ ಸಾಲಿನ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಒಟ್ಟು 15,593 ಶಿಶುಗಳ ಜನನ ವಾಗಿದ್ದು, ಈ ಪೈಕಿ ಬಂಟ್ವಾಳ ತಾಲೂಕಿನಲ್ಲಿ38, ಬೆಳ್ತಂಗಡಿ 31, ಪುತ್ತೂರು 27, ಸುಳ್ಯ 25 ಹಾಗೂ ಮಂಗಳೂರು ತಾಲೂಕಿನಲ್ಲಿ 40 ಸೇರಿ ಒಟ್ಟು 161 ಶಿಶುಗಳು ಸಾವನ್ನಪ್ಪಿವೆ. 2013-14ನೆ ಸಾಲಿನಲ್ಲಿ 265 ಶಿಶುಗಳ ಮರಣವಾಗಿದ್ದರೆ, 2014-15ರಲ್ಲಿ 262 ಶಿಶುಗಳು ಸಾವನ್ನಪ್ಪಿದ್ದವು ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಸರ್ವೇಕ್ಷಣಾಧಿಕಾರಿ ಡಾ.ಸಿಕಂದರ್ ಪಾಷ ಉಪಸ್ಥಿತರಿದ್ದರು.

Write A Comment