ಮಂಗಳೂರು, ನ.30: ಮುಂಬೈಗೆ ಹತ್ತಿರವಾದ ಮಂಗಳೂರು ನಗರದಲ್ಲಿ ಬಾಲಿವುಡ್ ಚಲನಚಿತ್ರ ಚಟುವಟಿಕೆಯನ್ನು ವಿಸ್ತರಿಸುವ ಇಚ್ಛೆ ತನಗಿದೆ. ಮಂಗಳೂರು ನಗರ ಮತ್ತು ಇಲ್ಲಿನ ಪರಿಸರ ತನಗೆ ಇಷ್ಟವಾಗಿದ್ದು, ರಜಾ ದಿನಗಳಲ್ಲಿ 4-5 ದಿನ ಮಂಗಳೂರಿನಲ್ಲಿ ತಂಗುವುದಾಗಿ ಬಾಲಿವುಡ್ ನಟ ಸೋನು ಸೂದ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ವಿವಿಧ ಭಾಷೆಗಳ ಬಗ್ಗೆ ನನಗೆ ಪ್ರೀತಿ, ಗೌರವವಿದ್ದು, ನಾನು ತಮಿಳು ಭಾಷೆಯಲ್ಲಿ ಪ್ರಥಮ ಚಿತ್ರದಲ್ಲಿ ನಟಿಸಿದ್ದೇನೆ. ಹಿಂದಿ ಚಲನಚಿತ್ರಗಳ ಸಹಿತ ಕನ್ನಡದಲ್ಲೂ ನಟಿಸಿದ್ದೇನೆ ಎಂದು ಸೂದ್ ತಿಳಿಸಿದರು.
ಮುಂಬೈಯಲ್ಲಿ ಬಹುತೇಕ ಚಲನಚಿತ್ರಗಳ ಚಿತ್ರೀಕರಣವಾಗುತ್ತಿವೆ. ಈ ರೀತಿ ಚಲನಚಿತ್ರ ನಿರ್ಮಾಣದ ಕೇಂದ್ರೀ ಕರಣವನ್ನು ತಪ್ಪಿಸಲು ಬೆಂಗಳೂರು, ಮಂಗಳೂರುಗಳಂತಹ ಪ್ರದೇಶಗಳು ಸೂಕ್ತವಾಗಿವೆ. ಇಂತಹ ಪ್ರದೇಶಗಳಲ್ಲಿ ಚಲನಚಿತ್ರ ನಿರ್ಮಾಣವಾಗಬೇಕಾಗಿದೆ ಎಂದರು.
ಜಾಕಿಚಾನ್ನಂತಹ ಮೇರು ನಟರು ಭಾರತದಲ್ಲಿನ ಚಲನ ಚಿತ್ರಗಳಲ್ಲಿ ಮುಂದೆಯೂ ನಟಿಸಲು ಆಸಕ್ತರಾಗಿದ್ದಾರೆ. ಇತ್ತೀಚೆಗೆ ಅವರ ಜೊತೆ ನಾನು ಶೂಟಿಂಗ್ನಲ್ಲಿ ಭಾಗವಹಿಸಿದ ಸಂದರ್ಭ ದಲ್ಲಿ ಈ ಬಗ್ಗೆ ನನ್ನಲ್ಲಿ ತಿಳಿಸಿದ್ದಾರೆ. ಮುಂದೆ ನಾನು ಮತ್ತು ಜಾಕಿಚಾನ್ ಜೊತೆಯಾಗಿ ನಟಿಸುವ ಚಿತ್ರವನ್ನು ನೀವು ಶೀಘ್ರದಲ್ಲೇ ನಿರೀಕ್ಷಿಸಬಹುದು ಎಂದು ಸೂದ್ ಹೇಳಿದರು.


