ಮೂಡಬಿದಿರೆ,ನ.28 : ನುಡಿಸಿರಿಯ ಎರಡನೇ ದಿನವಾದ ಶುಕ್ರವಾರ ಶ್ರೀ ಹರಿದಾಸ ಭಟ್ಟ ವೇದಿಕೆಯಲ್ಲಿ ಪುತ್ತೂರಿನ ನೃತ್ಯೋಪಾಸನ ಕಲಾ ಕೇಂದ್ರ ಮತ್ತು ಉಡುಪಿಯ ನೃತ್ಯ ನಿಕೇತನ ತಂಡಗಳ ಕಣ್ ಸೆಳೆಯುವ ನೃತ್ಯರೂಪಕ ಅತ್ಯಂತ ಸುಂದರವಾಗಿ ಮೂಡಿಬಂದಿತ್ತು.
ಪುತ್ತೂರಿನ ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದ ತಂಡದಿಂದ ಸಪ್ತ ಸ್ವರಾತ್ಮ ದರ್ಶನ ಎಂಬ ನೃತ್ಯರೂಪಕ ಪ್ರದರ್ಶನಗೊಂಡಿತ್ತು. ಓಂಕಾರ ಮಂತ್ರ, ಗಾಯತ್ರಿ ಮಂತ್ರ, ಶಿವನ ಐದು ಮುಖಗಳನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಲಾಯಿತು. ಸಪ್ತ ಸ್ವರಾತ್ಮ ದರ್ಶನ ಸಂಗೀತದ ಆಧಾರ ಸ್ವರಗಳಾಗಿರುವ ಸಪ್ತಸ್ವರಗಳ ಹುಟ್ಟು ಮತ್ತು ಬೆಳವಣಿಗೆಗಳ ಕುರಿತಾದ ಸಂಕ್ಷಿಪ್ತ ವಿವರಣೆಯನ್ನು ಹೊಂದಿರುವ ನೃತ್ಯರೂಪಕ.
ನಂತರ ಉಡುಪಿಯ ನೃತ್ಯ ನಿಕೇತನ ತಂಡದಿಂದ ವಿದುಷಿ ಲಕ್ಷ್ಮಿಗುರುರಾಜ್ ನಿರ್ದೇಶನದಲ್ಲಿ ನೃತ್ಯರೂಪಕ ನಡೆಯಿತು. ಈ ತಂಡವು ಅಷ್ಟದಿಗ್ಪಾಲಕ ಸ್ತುತಿ, ಕುಣಿದಾಡೋ ಕೃಷ್ಣ ಮತ್ತು ಕೃಷ್ಣನ ನವರಸ ಎಂಬ ನೃತ್ಯರೂಪಕಗಳನ್ನು ಪ್ರದರ್ಶಿಸಿದರು.
ಇದರ ಜೊತೆಗೆ ಹೆಳವನಕಟ್ಟೆ ಗಿರಿಯಮ್ಮನ ಗೀತೆಗಳಿಗೆ ಜನಪದ ಶೈಲಿಯಲ್ಲಿ ನೃತ್ಯ ಮತ್ತು ದಶಾವತಾರಗಳು ಕೂಡ ಈ ತಂಡದಿಂದ ಪ್ರದರ್ಶನಗೊಂಡು ಪ್ರೇಕ್ಷಕನ ಮನಸೆಳೆಯಿತು.










