ಕನ್ನಡ ವಾರ್ತೆಗಳು

ಉಡುಪಿಯಲ್ಲಿ ಕನಕ ಜಯಂತಿ: ಕನಕ ಚಿಂತನೆಯಿಂದ ಸಹಿಷ್ಣುತೆ- ಸಿ‌ಇ‌ಓ

Pinterest LinkedIn Tumblr

ಉಡುಪಿ: ಪ್ರಸ್ತುತ ಸಮಾಜದಲ್ಲಿ ಚರ್ಚೆಗೀಡಾಗುತ್ತಿರುವ ಅಸಹಿಷ್ಣುತೆ ವಿಷಯಕ್ಕೆ ಸಂಬಂದಿಸಿದಂತೆ ಕನಕದಾಸರ ಕೀರ್ತನೆಗಳನ್ನು ಅರಿತರೆ ಸಮಾಜದಲ್ಲಿ ಸಹಿಷ್ಣುತೆ ಮೂಡಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅವರು ಶನಿವಾರ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ನಲ್ಲಿ ಆಯೋಜಿಸಿದ್ದ ಶ್ರೀ ಕನಕದಾಸ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Udp_Kanaka Jayanthi_Celebration (1) Udp_Kanaka Jayanthi_Celebration (2) Udp_Kanaka Jayanthi_Celebration (3) Udp_Kanaka Jayanthi_Celebration (4)

ಕನಕದಾಸರು ತಮ್ಮ ಕೀರ್ತನೆಯಲ್ಲಿ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂದೇಶ ನೀಡಿದ್ದಾರೆ, ಈ ಕೀರ್ತನೆಯ ಮಹತ್ವ ಇಂದು ಎಂದಿಗಿಂತ ಹೆಚ್ಚಾಗಿದೆ , ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಂಬಂದಿಸಿದಂತೆ ಈ ಕೀರ್ತನೆಗೆ ಪ್ರಾಮುಖ್ಯತೆ ಇದೆ, ಸಮಾಜದಲ್ಲಿನ ಅಸಹಿಷ್ಣುತೆ ವಿರುದ್ದ, ಮೂಡನಂಬಿಕೆ ವಿರುದ್ದ ಜಾಗೃತರಾಗಲು ಕನಕದಾಸರ ಜಯಂತಿ ಸ್ಪೂರ್ತಿಯಾಗಲಿ, ಕನಕರಿಗೆ ಮತ್ತು ಉಡುಪಿಗೆ ಅವಿನಾಭಾವ ಸಂಬಂದ ಇದ್ದು ಅವರ ಭಕ್ತಿಗೆ ಮೆಚ್ಚಿ ಶ್ರೀ ಕೃಷ್ಣ ದರ್ಶನ ನೀಡಿದ್ದು ಎಲ್ಲರಿಗೂ ತಿಳಿದಿದೆ ಎಂದು ಸಿ‌ಇ‌ಓ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಅಣ್ಣಾಮಲೈ ಮಾತನಾಡಿ, ಸಮಾಜದಲ್ಲಿ ಎಲ್ಲಾ ಜಾತಿ ವರ್ಗಗಳ ಜನರೂ ಸಮಾನರು , ಮಾನವೀಯತೆಯೇ ಮುಖ್ಯ ಎಂಬುದನ್ನು ಸಾರಿದ ಕನಕದಾಸರು ಚಿಂತನೆಗಳನ್ನು ಪ್ರಮುಖವಾಗಿ ಯುವಜನತೆ ಅರಿಯಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್, ಕನಕರು ಸಾರಿದ ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕು ಎಂದು ಹೇಳಿದರು.

ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ, ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಾದೆಕಲ್ಲು ವಿಷ್ಣು ಭಟ್ , ಕನಕದಾಸರು ಒಬ್ಬ ರಾಷ್ಟ್ರೀಯ ಸಂತರು, ಭಕ್ತಿ ಪಂಥದ ಪ್ರಮುಖರಾಗಿದ್ದ ಅವರು, ತಳವರ್ಗದವರಿಂದ ಬಂದವರಾಗಿದ್ದು, ಜನ ಜೀವನದ ಎಲ್ಲಾ ಮಗ್ಗಲುಗಳನ್ನು ಕಂಡವರಾಗಿದ್ದು, ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳನ್ನು ರಚಿಸಿ ಮಾನವೀಯ ಸಂದೇಶಗಳನ್ನು ತಿಳಿಸಿದ್ದರು, ಅವರ ರಾಮಧಾನ್ಯ ಚರಿತ್ರೆ , ಧಾನ್ಯಗಳ ಮೂಲಕ ಜನ ಸಾಮಾನ್ಯರನ್ನು ಪ್ರತಿನಿಧಿಸುವ ಕೃತಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನಕ ಜಯಂತಿ ಕುರಿತು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ದೇವದಾಸ ಪೈ ಸ್ವಾಗತಿಸಿದರು, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ವಂದಿಸಿದರು, ಅಡ್ವೆ ರವೀಂದ್ರ ಪೂಜಾರಿ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Write A Comment