ಮೂಡುಬಿದಿರೆ, ನ.27: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿವೇಕಾನಂದ ನಗರ ಪುತ್ತಿಗೆಯಲ್ಲಿ ನಡೆದ 12ನೆ ವರ್ಷದ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಯ ಉದ್ಘಾಟನೆಗೆ ಮುಂಚಿತವಾಗಿ 52 ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವೈಭವದ ಮೆರವಣಿಗೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳ ಆಚಾರ, ವಿಚಾರ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ 800ಕ್ಕೂ ಹೆಚ್ಚಿನ ಕಲಾವಿದರನ್ನೊಳಗೊಂಡ ಕಲಾ ತಂಡಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆಯು ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಎಡಭಾಗದಿಂದ ಸಂಜೆ 5:30ಕ್ಕೆ ಹೊರಟಿತು. ಆಕರ್ಷಕ ಸಿಡಿಮದ್ದುಗಳು ಸಿಡಿಯುತ್ತಿದ್ದಂತೆ ಒಂದೊಂದೆ ಕಲಾತಂಡಗಳು ಪ್ರದರ್ಶನ ನೀಡುತ್ತಾ ಮುಂದೆ ಸಾಗಿದವು. ಕೆಎಸ್‌ಆರ್‌ಪಿ ತಂಡದ ಬ್ಯಾಂಡ್ ಸೆಟ್, ನಂದಿ ಧ್ವಜ, ತಟ್ಟಿರಾಯ ಕುಣಿತಗಳು, ಶಂಖಗಳ ನಾದ, ಕೊಂಬಿನ ಧ್ವನಿ, ಕುಂದಾಪುರದ ದೋಲಿನ ಸದ್ದು, ಚೆಂಡೆ ವಾದನದ ಸೊಗಸು, ಕಲ್ಲಡ್ಕದ ಗೊಂಬೆ ಕುಣಿತ, ತುಳುನಾಡಿನ ಆಟಿಕಳಂಜ, ಕರಾವಳಿಯ ಗಂಡುಕಲೆ ಯಕ್ಷಗಾನ ವೇಷದೊಂದಿಗೆ ಆಳ್ವಾಸ್ ವಿದ್ಯಾರ್ಥಿ ತಂಡ, ಮಂಗಳೂರಿನ ಪೂಜಾ ಕುಣಿತ, ಚಿತ್ರದುರ್ಗದ ಬ್ಯಾಂಡ್, ವೀರಭದ್ರ ಕುಣಿತ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದವು.
ತುಳುನಾಡಿನ ಕೊರಗರ ಡೋಲು ಕುಣಿತ, ವಾದ್ಯಗಳು, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್ ತಂಡ, ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿಯವ ತ್ರಿವರ್ಣ ಉಡುಪಿನೊಂದಿಗೆ ವಿದ್ಯಾರ್ಥಿಗಳ ತಂಡ, ಚೆಂಡೆ, ಪಂಚವಾದ್ಯ, ಬೆಳಗಾವಿ ಪೇಟ ಧರಿಸಿದ ಗಣ್ಯರು ಮೆರವಣಿಗೆಯಲ್ಲಿ ಸಾಗಿ ಬಂದದ್ದು ಗಮನ ಸೆಳೆಯಿತು.
ಮೆರವಣಿಗೆಯ ಕೊನೆಯಲ್ಲಿ ಕಲಶ ಹಿಡಿದ ವಿದ್ಯಾರ್ಥಿಗಳು ಸಮ್ಮೇಳನದ ಅಧ್ಯಕ್ಷ ಡಾ.ಟಿ.ವಿ ವೆಂಕಟಾಚಲ ಶಾಸ್ತ್ರಿ, ಉದ್ಘಾಟಕರಾದ ಡಾ.ವೀಣಾ ಶಾಂತೇಶ್ವರ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ ಹಾಗೂ ಅತಿಥಿ ಗಣ್ಯರನ್ನು ಸ್ವಾಗತಿಸಿ ಮುಂದೆ ನಡೆದರು. ಮೆರವಣಿಗೆ ವಿವೇಕಾನಂದ ನಗರದ ಬೃಹತ್ ಸಭಾಂಗಣಕ್ಕೆ ಸುತ್ತು ಬಂದು ವೇದಿಕೆಯ ಮುಂಬದಿಯಿಂದ ಸಾಗಿ ಸಂಜೆ 6 ಗಂಟೆಗೆ ಸಂಪನ್ನಗೊಂಡಿತ್ತು.
4 ಬಸವಗಳು: ಮೆರವಣಿಗೆಯಲ್ಲಿ ಕೇವಲ ಪ್ರದರ್ಶನಕ್ಕಾಗಿ ನಾಲ್ಕು ಬಸವಗಳನ್ನು ಕರೆಯಲಾಗಿದ್ದು, ಇವುಗಳು ಈ ಬಾರಿಯ ನುಡಿಸಿರಿಯಲ್ಲಿ ಗಮನ ಸೆಳೆದವು.














