ಕುಂದಾಪುರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬ ವಿಜೃಂಭಣೆಯಿಂದ ಬುಧವಾರ ಜರುಗಿತು. ಕೊಟೇಶ್ವರದ ಅಧಿದೇವ ಶ್ರೀ ಕೋಟಿಲಿಂಗೇಶ್ವರನ ವಾರ್ಷಿಕ ಬ್ರಹ್ಮರಥೋತ್ಸವವೇ `ಕೊಡಿಹಬ್ಬ’. ಈ ಉತ್ಸವದ ಹಿಂದೆ ವಿಶೇಷ ನಂಬಿಕೆ ಇದೆ. ವೃಶ್ಚಿಕ ಮಾಸದ ಪೂರ್ಣಿಮೆಯಂದು ಕೊಡಿಹಬ್ಬ.
ಬುಧವಾರ ಮಧ್ಯಾಹ್ನ ನಡೆದ ಶ್ರೀ ಮನ್ಮಹಾರಥೋತ್ಸವದಲ್ಲಿ ಸಾವಿರಾರು ಜನ ಪಾಲ್ಘೋಂಡು ಭಕ್ತಿ ಮೆರೆದರು. ಕಬ್ಬಿನ ಕೊಡಿಗಳ ವ್ಯಾಪಾರ ಜೋರಾಗಿತ್ತು. ನವದಂಪತಿಗಳು ದೇವಳಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆಯುವುದು, ಸುತ್ತಕ್ಕಿ ಸಮರ್ಪಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಕಬ್ಬಿನ ಕೊಡಿಗಳನ್ನು ಮನೆಗೆ ಕೊಂಡೊಯ್ಯುವ ಪರಿಪಾಠವಿದೆ. ಉತ್ಸವದ ಸಮಯದಲ್ಲಿ ಆಕರ್ಷಣೀಯ ಚಂಡೆವಾದನವೂ ಜಾತ್ರೆಗೆ ಇನ್ನಷ್ಟು ಮೆರಗು ನೀಡಿತು.
ದೇವಾಲಯದ ಇತಿಹಾಸ: ಪವಿತ್ರವಾದ ಸಪ್ತ ಮೋಕ್ಷ ಕ್ಷೇತ್ರಗಳಲ್ಲೊಂದಾದ ಇಲ್ಲಿ ಕೋಟಿ ಋಷಿಗಳು ಒಟ್ಟಾಗಿ ತಪಸ್ಸು ಆಚರಿಸಿದ ಪುಣ್ಯ ಭೂಮಿಯಲ್ಲಿ ಪರಶಿವ ನೆಲೆಯಾದನು ಸಾಕ್ಷಾತ್ ಪರಶಿವ ನೆಲೆಯಾದ ಈ ಕ್ಷೇತ್ರ ಕೋಟಿಲಿಂಗೇಶ್ವರ ಕ್ಷೇತ್ರವಾಗಿದೆ ಎಂದು ಪುರಾಣ ಹೇಳುತ್ತದೆ.
ಗರುಡ ಸುತ್ತುತ್ತೆ: ಇನ್ನು ರಥೋತ್ಸವದ ಮೊದಲು ಮಧ್ಯಾಹ್ನದ ಸುಮಾರಿಗೆ ದೇವಳದ ಎದುರಿಗಿನ ಬ್ರಹ್ಮರಥದ ಮೇಲೆ ಗರುಡ ಪಕ್ಷಿ ಮೂರು ಸುತ್ತು ಸುತ್ತುತ್ತದೆ, ಇದು ಜಾತ್ರೆಯ ಆರಂಭಕ್ಕೆ ಶಯಭ ಸೂಚನೆ ಎಂಬ ನಿಟ್ಟಿನಲ್ಲಿ ರಥೋತ್ಸವ ಆರಂಭಗಳ್ಳುತ್ತದೆ.
ಕೋಟಿ ತೀರ್ಥ ಪುಷ್ಕರಣಿ: ದೇವಸ್ಥಾನದ ಸಮೀಪದ ಒಂದು ಭಾಗದಲ್ಲಿರುವ ಸುಮಾರು ೪.೫ ಎಕ್ರೆ ವಿಸ್ತೀರ್ಣದ ಕೋಟಿ ತೀರ್ಥ ಪುಷ್ಕರಣಿ ಬ್ರಹ್ಮ ದೇವ ತನ್ನ ಕಮಂಡಲದಿಂದ ನಿರ್ಮಿಸಿದ್ದು ಇದರಲ್ಲಿ ಸ್ನಾನಗೈಯುವುದರಿಂದ ಪಾಪ ಕರ್ಮಾದಿಗಳು ನಾಶವಾಗುತ್ತದೆ ಎಂಬ ಪ್ರತೀತಿ ಇದೆ. ಹಬ್ಬದಂದು ಪುಷ್ಕರಣಿ ಸುತ್ತಲೂ ಹಾಸುವ ಬಿಳಿ ಬಟ್ಟೆ ಮುಂಭಾಗದಲ್ಲಿ ಕುಳಿತುಕೊಳ್ಳುವ ಅಪೇಕ್ಷಿತರು ಭಕ್ತಾಧಿಗಳು ಹಾಕುವ ಅಕ್ಕಿಯನ್ನು ಶೇಖರಿಸುತ್ತಾರೆ. ಇದಕ್ಕೆ ‘ಸುತ್ತಕ್ಕಿ’ ಸೇವೆ ಎನ್ನುವ ಹೆಸರಿದೆ.
ಬ್ರಹ್ಮ ರಥ: ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.
ಕೊಡಿ(ಕಬ್ಬು) ಖರೀದಿ: ಜಾತ್ರೆಯ ದಿನದಂದು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಮನೆಗೆ ತೆರಳುವಾಗ ರಥಬೀದಿಗಳಲ್ಲಿ ಮಾರುವ ಕೊಡಿ(ಕಬ್ಬು) ಯನ್ನು ಕೊಂಡೊಯ್ಯುವುದು ವಾಡಿಕೆ. ಇದರಿಂದ ಬಾಳಿನಲ್ಲಿ ಕೊಡಿ ಅರಳುತ್ತೆ ಎನ್ನುವ ನಂಬಿಕೆ ಇದೆ. ಮದುವೆಯಾದ ಹೊಸ ಜೋಡಿಗಳು ಈ ಆಚರಣೆಯನ್ನು ಮಾಡುವುದು ರೂಢಿಯಾಗಿದೆ.
ಅಪಾರ ಭಕ್ತಾಧಿಗಳು: ಹಬ್ಬವು ವಾರಗಳ ಕಾಲ ನಡೆಯಲಿದ್ದು ದೇವಳದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ನಡೆಯುತ್ತಿದೆ. ಹಬ್ಬದ ಹಿಂದಿನ ದಿನದಿಂದಲೇ ಭಕ್ತಾಧಿಗಳ ಅಪಾರ ಸಂಖ್ಯೆಯಲ್ಲಿ ಪ್ರಮಾಣದಲ್ಲಿ ಸೇರುತ್ತಾರೆ. ಉತ್ಸವದಂದು ಬೆಳಿಗ್ಗೆ ೪ ರಿಂದಲೇ ದೇವರ ದರ್ಶನ, ಕೊಡಿ ಕೊಂಡು ಹೋಗುವುದು, ಸುತ್ತಕ್ಕಿ ಸಮರ್ಪಣೆಯಂತಾ ವಿಧಿಗಳಲ್ಲಿ ಸಾವಿರಾರು ಜನರು ಒಂದುಗುಡುತ್ತಾರೆ. ಮಧ್ಯಾಹ್ನ ಜರಗುವ ಬ್ರಹ್ಮ ರಥೋತ್ಸವ ಮತ್ತು ಸಂಜೆ ನಡೆಯುವ ರಥೋತ್ಸವದಲ್ಲಿ ಅಸಂಖ್ಯಾತ ಜನರು ಸೇರಿ ಶ್ರೀ ದೇವರ ದರ್ಶನ ಪಡೆಯುತ್ತಾರೆ.
ವರದಿ,ಚಿತ್ರ- ಯೋಗೀಶ್ ಕುಂಭಾಸಿ






































