ಕನ್ನಡ ವಾರ್ತೆಗಳು

ಮೂವರು ಸಾಧಕರಿಗೆ ‘ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ

Pinterest LinkedIn Tumblr

Alvas_sudisiri_awrd

ಮೂಡುಬಿದಿರೆ,ನ.20: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕೃತಿ ಸಮ್ಮೇಳನ “ಆಳ್ವಾಸ್ ವಿದ್ಯಾರ್ಥಿಸಿರಿ 2015”  ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ, ಸಂಸ್ಕೃತಿ ಕ್ಷೇತ್ರಕ್ಕೆ ಅನುಪಮ ಕೊಡುಗೆಯನ್ನು ನೀಡಿದ ಮೂವರು ಸಾಧಕರಿಗೆ ‘ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಈ ಗೌರವಕ್ಕೆ ಮಕ್ಕಳ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಪುರಸ್ಕಾರ ಪಡೆದಿರುವ ಸಾಹಿತಿ ಟಿ.ಎಸ್. ನಾಗರಾಜ ಶೆಟ್ಟಿ, ಮಕ್ಕಳ ರಂಗಭೂಮಿಯಲ್ಲಿ ಹೊಸ ಚಿಂತನೆ ಮತ್ತು ಪ್ರಯೋಗಗಳನ್ನು 25 ವರ್ಷಗಳಿಂದ ನಿರಂತರ ನಡೆಸುತ್ತಾ ಬರುತ್ತಿರುವ ಸಾಗರದ ‘ಕಿನ್ನರ ಮೇಳ ತುಮರಿ’ಸಂಸ್ಥೆ ಹಾಗೂ ಬಹುಮುಖ ಪ್ರತಿಭೆ, ಝೀ ಕನ್ನಡ ಮತ್ತು ಹಿಂದಿ ವಾಹಿನಿಯ ಸರಿಗಮಪ ಲಿಟ್ಲ್‌ಚಾಂಪ್ ವಿಜೇತ ಬಾಲ ಪ್ರತಿಭೆ ಮಾ. ಗಗನ್ ಜಿ ಗಾಂವ್ಕರ್ ಇವರಿಗೆ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವ ತಿಳಿಸಿದರು.

ಸಾಹಿತಿ ಟಿ.ಎಸ್ ನಾಗರಾಜ ಶೆಟ್ಟಿ ಇವರು ಮೂಲತ: ಚಿಕ್ಕಬಳ್ಳಾಪುರದವರು. ತಿಪಟೂರಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರು. ಸಂಕರ, ನವಿಲುಗರಿ, ಸಕ್ಕರೆ ಬೊಂಬೆ, ಪ್ರಾಣಿಗಳ ಪರೀಕ್ಷೆ, ಕರಡಿ ರಸಾಯನ, ಕಾಮನಬಿಲ್ಲು ಮೊದಲಾದ 25ಕ್ಕೂ ಅಧಿಕ ಮಕ್ಕಳ ಕೃತಿಗಳನ್ನೂ, ಹಲವು ಅನುವಾದ ಮತ್ತು ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ, ಗೊರೂರು, ಸಿಸು ಸಂಗಮೇಶ, ಶಿವರಾಮ ಕಾರಂತರ ಹೆಸರಿನ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾ ಸಾಹಿತ್ಯ ಪುರಸ್ಕಾರ ಲಭಿಸಿದೆ.

ಕಿನ್ನರ ಮೇಳ ತುಮರಿ ನಿರ್ದೇಶಕ ಕೆ.ಜಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ 25 ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ನಾಟಕ ಪ್ರದರ್ಶನ, ಮಕ್ಕಳ ರಂಗ ತರಬೇತಿ, ಮಕ್ಕಳ ಸಂಸ್ಕೃತಿ ಶಿಬಿರ, ಹಿನ್ನೀರ ರಂಗೋತ್ಸವ, ರಂಗ ಸಹೃದಯತಾ ಶಿಬಿರ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ಗಾನಕೋಗಿಲೆ ಬಿರುದು ಪಡೆದ ಗಗನ್ ಜಿ ಗಾಂವ್ಕರ್ ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲಿನ ಎಂಟನೇ ತರಗತಿ ವಿದ್ಯಾರ್ಥಿ.ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ರಸಪ್ರಶ್ನೆ, ನಾಟಕ, ಏಕಪಾತ್ರಾಭಿನಯ ನಟನೆ, ಕವಿತಾ ರಚನೆ ಹೀಗೆ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡ ಪ್ರತಿಭೆ. 2012 ಝೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್, ಕಲಾ ಸಿಂಧೂರ,ಸ್ವರ ಸೌರಭ, ಸ್ವರ ಸಿಂಚನ ಮೊದಲಾದ ಪ್ರಶಸ್ತಿಗಳು ಲಭಿಸಿದೆ.

ನವಂಬರ 26 ರಂದು ವಿದ್ಯಾಗಿರಿಯಲ್ಲಿ ನಡೆಯುವ ವಿದ್ಯಾರ್ಥಿಸಿರಿಯ ಉದ್ಘಾಟನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸನ್ಮಾನ ಪತ್ರ, ಸ್ಮರಣಿಕೆ ಮತ್ತು ಹತ್ತು ಸಾವಿರ ನಗದು ಬಹುಮಾನವನ್ನು ಹೊಂದಿರುತ್ತದೆ.

Write A Comment