ಕನ್ನಡ ವಾರ್ತೆಗಳು

ಕೋಟ: ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಯನ್ನು ಬಚಾವ್ ಮಾಡಿದ ಆರೋಪಿಯ ಕುಟುಂಬಿಕರು..!

Pinterest LinkedIn Tumblr

ಉಡುಪಿ: ಖತರ್ನಾಕ್ ಮರಗಳ್ಳ ರಮೇಶ್ ಎಂಬಾತನ ಪತ್ತೆಗಾಗಿ ವಿಶೇಷ ಕರ್ತವ್ಯದ ಮೇಲೆ ತೆರಳಿದ್ದ ವೇಳೆ ಆರೋಪಿ ಸಹಿತ ಆತನ ಕುಟುಂಬಿಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಪೊಲೀಸರಿಬ್ಬರ ಮೇಲೆ ಹಲ್ಲೆ ನಡೆಸಿ ಆರೋಪಿಯನ್ನು ಕರೆದೊಯ್ದ ಘಟನೆ ಉಡುಪಿ ತಾಲೂಕಿನ ಕೋಟ ಪೊಲೀಸ್ ಠಾಣೆಯಲ್ಲು ನ.19 ಗುರುವಾರ ಬೆಳಿಗ್ಗೆ ನಡೆದಿದೆ.

ಆರೋಪಿಯನ್ನು ರಮೇಶ್, ಆತನ ತಂಗಿ ಮಮತಾ, ಬಾವ ಮಂಜುನಾಥ, ಸೋದರ ಗಣೇಶ್, ಹಾಗೂ ಶ್ರೀನಿವಾಸ್ ಎನ್ನಲಾಗಿದೆ. ಹಲ್ಲೆಗೊಳಗಾದವರನ್ನು ಕೋಟ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಶೋಕ್ ಹಾಗೂ ಸಿಬ್ಬಂದಿ ಮಂಜಪ್ಪ ಎನ್ನಲಾಗಿದೆ.

Sasthana_Store Fire Case_Arrest (4)

ಕೆಲವು ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಗಳ್ಳತನ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ರಮೇಶ್ ಎಂಬಾತನ ವಿರುದ್ಧ ಎರಡು ತಿಂಗಳ ಹಿಂದೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರಗಳ್ಳತನ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ವಾರೆಂಟ್ ಕೂಡ ಜಾರಿಯಾಗಿತ್ತೆನ್ನಲಾಗಿದೆ. ವಾರೆಂಟ್ ಜಾರಿಯಾದ ಹಿನ್ನೆಲೆ ಆತ ಹುಣ್ಸೆಮಕ್ಕಿ ಸಮೀಪದಲ್ಲಿ ಇರುವ ಖಚಿತ ವರ್ತಮಾನದ ಮೇರೆಗೆ ವಿಶೇಷ ಕರ್ತವ್ಯದ ಮೇಲೆ ಕೋಟ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಶೋಕ್ ಹಾಗೂ ಸಿಬ್ಬಂದಿ ಮಂಜಪ್ಪ ಅವರು ಪ್ರಕರಣದ ಬಗ್ಗೆ ಆರೋಪಿಗೂ ತಿಳಿಸಿ ಬಂಧಿಸಿ ಆಟೋ ರಿಕ್ಷಾದಲ್ಲಿ ಕರೆತರುತ್ತಿರುವ ವೇಳೆ ಆಟೋ ಚಾಲಕನನ್ನು ಹೊರದೂಡಿ ವಾಹನವನ್ನು ಪಲ್ಟಿ ಮಾಡಲು ರಮೇಶ್ ಹೊರಟಿದ್ದಲ್ಲದೇ ಪೊಲೀಸರ ಸಮವಸ್ತ್ರವನ್ನು ಹರಿದಿದ್ದ ಎನ್ನಲಾಗಿದೆ. ಆದರೇ ಪೊಲೀಸರು ಆತನನ್ನು ಹಿಡಿದು ರಿಕ್ಷಾದಲ್ಲಿ ಮುಂದಕ್ಕೆ ಕರೆತರುತ್ತಿದ್ದ ವೇಳೆಯೇ ಆರೋಪಿಯಾದ ರಮೇಶ್, ಆತನ ತಂಗಿ ಮಮತಾ, ಬಾವ ಮಂಜುನಾಥ, ಸೋದರ ಗಣೇಶ್, ಹಾಗೂ ಶ್ರೀನಿವಾಸ್ ಮೊದಲಾದವರು ರಿಕ್ಷಾ ಅಡ್ಡಗಟ್ಟಿ ಚಾಲಕನನ್ನು ದೂಡಿ ಹಾಕಿದ್ದಲ್ಲದೇ ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಅಲ್ಲದೇ ರಮೇಶ್ ಸ್ಥಳದಿಂದ ಪರಾರಿಯಾಗಲು ಸಹಕರಿಸಿ ಎಲ್ಲರೂ ಅಲ್ಲಿಂದ ತೆರಳಿದ್ದಾರೆ. ಇದೇ ವೇಳೆ ಹಲ್ಲೆ ತಪ್ಪಿಸಲು ಬಂದ ಜಪ್ತಿಯ ರಾಘವೇಂದ್ರ ಮತ್ತು ಅಣ್ಣಿ ಭಂಡಾರಿ ಹಾಗೂ ರಿಕ್ಷಾ ಚಾಲಕ ರಾಘು ಎನ್ನುವವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ಪರಿಣಾಮ ಪೊಲಿಸರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ನಡೆದ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಲು ಹೊರಟ ಎಸ್ಸೈ ಅವರನ್ನು ದುಷ್ಕರ್ಮಿಗಳು ತಿವಿದು ಕೊಂದಿದ್ದರು. ಹಾಗಾದರೇ ಆರೋಪಿಗಳ ಪತ್ತೆಗಾಗಿ ಹೊರಡುವ ಪೊಲೀಸರಿಗೆ ರಕ್ಷಣೆಯೇ ಇಲ್ಲವೇ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸದ್ಯ ಕೋಟ ಪೊಲೀಸರು ಆರೋಪಿಗಳ ಹುಡುಕಾಟ ನಡೆಸುತ್ತಿದ್ದು ಬಂಧನಕ್ಕೆ ಬಲೆ ಬೀಸಿದ್ದಾರಂತೆ.

 

Write A Comment