ಕನ್ನಡ ವಾರ್ತೆಗಳು

ಜೋಡಿ ಕೊಲೆ ಬಗ್ಗೆ ಮಾಧ್ಯಮಗಳೊಡನೆ ಕೈದಿ ಫೈಜಲ್ ಪ್ರತಿಕ್ರಿಯೆ : ಕರ್ತವ್ಯ ಲೋಪವೆಸಗಿದ ಕಾನ್‌ಸ್ಟೇಬಲ್ ಅಮಾನತು

Pinterest LinkedIn Tumblr

Khaidi_Fizal_byte_1

ಕಡತ ಚಿತ್ರ

ಮಂಗಳೂರು, ನ.19 :ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ಓರ್ವರನ್ನು ಕರ್ತವ್ಯಲೋಪದ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ. ಮಂಗಳೂರು ಸಬ್‌ಜೈಲ್‌ನಲ್ಲಿ ಇತ್ತೀಚೆಗೆ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಲೆದಂಡವಾಗಿದೆಯೆನ್ನಲಾಗಿದೆ. ಬಂದರು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಅಯ್ಯಪ್ಪ ಅಮಾನುತುಗೊಂಡಿರುವ ಸಿಬ್ಬಂದಿ.

ಮಂಗಳೂರು ಸಬ್ ಜೈಲ್‌ನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ರೌಡಿ ಮಾಡೂರು ಇಸುಬು ಮತ್ತು ಕೊಲೆ ಪ್ರಕರಣದ ಆರೋಪಿ ಗಣೇಶ್ ಶೆಟ್ಟಿ ಅವರನ್ನು ವಿರೋಧಿಗಳ ಗುಂಪು ನ.೨ರಂದು ಬೆಳಗ್ಗೆ ಜೈಲಿನಲ್ಲಿಯೇ ಹತ್ಯೆ ಮಾಡಿದ್ದು, ಅದೇ ದಿನ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಫೈಜಲ್ ಎಂಬಾತನನ್ನು ಪೊಲೀಸ್ ವಾಹನದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಅಯ್ಯಪ್ಪ ಆತನಿಗೆ ಬೆಂಗಾವಲು ಕರ್ತವ್ಯದಲ್ಲಿದ್ದರು.

ಈ ವೇಳೆ ವಾಹನದಲ್ಲಿದ್ದುಕೊಂಡೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಫೈಜಲ್, ಮಾಡೂರು ಇಸುಬು ಮತ್ತು ಗಣೇಶ್ ಶೆಟ್ಟಿ ಹತ್ಯೆಗೆ ಜೈಲು ಅಧಿಕಾರಿಗಳೇ ಹೊಣೆಯೆಂದು ನೇರವಾಗಿ ಆಪಾದಿಸಿದ್ದ. ಜೈಲ್ ಸಿಬ್ಬಂದಿ ಚಕ್ರೇಶ್ ಕೊಲೆ ಆರೋಪಿಗಳಿಗೆ ನೀಲಿಬಣ್ಣದ ಪ್ಯಾಕೆಟೊಂದರಲ್ಲಿ ಚಾಕು ತಂದು ಕೊಟ್ಟಿದ್ದು, ಜೋಡಿ ಕೊಲೆಗಳು ನಡೆಯುವುದಕ್ಕೆ ಮುನ್ನ ಇತರ ಇಬ್ಬರು ಸಿಬ್ಬಂದಿಗಳಾದ ರಾಜೇಂದ್ರ ಮತ್ತು ಪುಟ್ಟಣ್ಣ ಅವರು ಸೆಲ್‌ನ ಬೀಗವನ್ನು ತೆರೆದು ಆರೋಪಿಗಳನ್ನು ಹೊರಗೆ ಬಿಟ್ಟಿದ್ದರೆಂದು ಆತ ಆಪಾದಿಸಿದ್ದ.

ಫೈಜಲ್‌ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ಅವಕಾಶ ನೀಡಿರುವ ಮೂಲಕ ಅಯ್ಯಪ್ಪ ಕರ್ತವ್ಯಲೋಪ ಸಲ್ಲಿಸಿದ್ದಾರೆಂದು ಈ ಬಗ್ಗೆ ವಿಚಾರಣೆ ನಡೆಸಿದ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

Write A Comment