ಕನ್ನಡ ವಾರ್ತೆಗಳು

ಆನೆಗುಡ್ಡೆಯಲ್ಲಿ ರಂಗೋಲಿ ರಂಗು; ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶಶಿಕಲಾ ಪೈ ಪರ್ಕಳ , ಸುಚಿತ್ರಾ ಕುಂದಾಪುರ, ಚೈತ್ರಾ ಜಿ.ಎ. ಉಡುಪಿ ಪ್ರಥಮ

Pinterest LinkedIn Tumblr

ಉಡುಪಿ: ಕುಂದಾಪುರ ತಾಲ್ಲೂಕಿನ ಶ್ರೀ ವಿನಾಯಕ ದೇವಸ್ಥಾನದ ವಠಾರದಲ್ಲಿ ಕುಂದಪ್ರಭ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಸಾರ್ವಜನಿಕ ಚುಕ್ಕೆ ರಂಗೋಲಿ ವಿಭಾಗದಲ್ಲಿ ಶಶಿಕಲಾ ಪೈ ಪರ್ಕಳ, ಪುಷ್ಪರಂಗೋಲಿ ವಿಭಾಗದಲ್ಲಿ ಸುಚಿತ್ರಾ ಕುಮಾರಿ ಕುಂದಾಪುರ ಮತ್ತು ವಿದ್ಯಾರ್ಥಿ ವಿಭಾಗದಲ್ಲಿ ಚೈತ್ರಾ ಜಿ.ಎ.ಉಡುಪಿ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯದ ವಿವಿಧ ವಿಭಾಗಗಳಿಂದ ಆಗಮಿಸಿದ 75 ರಂಗೋಲಿ ಕಲಾವಿದರು ಆರೋಗ್ಯಕರ ಸ್ಪರ್ಧೆಯಲ್ಲಿ ವರ್ಣರಂಜಿತ ವೈವಿಧ್ಯಮಯ ರಂಗೋಲಿಗಳನ್ನು ರಚಿಸಿದ್ದು ಸಾರ್ವಜನಿಕರ ಮೆಚ್ಚುಗೆ ಗಳಿಸಿದರು.

ಸಾರ್ವಜನಿಕ ಚುಕ್ಕೆ ರಂಗೋಲಿ ವಿಭಾಗದಲ್ಲಿ ಶಶಿಕಲಾ ಪೈ ಪರ್ಕಳ ಇವರು ರಚಿಸಿದ ರಂಗೋಲಿಗೆ ಪ್ರಥಮ ಸ್ಥಾನ ಲಭಿಸಿತು. ಪ್ರತಿಭಾ ಎ.ಹಂಗ್ಲೂರು ದ್ವಿತೀಯ ಸ್ಥಾನ, ಹಾಗೂ ಸುಮನಾ ಕೋಟ ತೃತೀಯ ಬಹುಮಾನಕ್ಕೆ ಪಾತ್ರರಾದರು.

Aanegudde_Rangoli_Compitation (4) Aanegudde_Rangoli_Compitation (2) Aanegudde_Rangoli_Compitation (3) Aanegudde_Rangoli_Compitation (5) Aanegudde_Rangoli_Compitation (1)

ಪುಷ್ಪ ರಂಗೋಲಿ ವಿಭಾಗದಲ್ಲಿ ಹೂ, ಅಕ್ಕಿ, ಉಪ್ಪು ಮುಂತಾದವುಗಳ ಉಪಯೋಗದಿಂದ ರಚಿಸಿದ ರಂಗೋಲಿ ಪರಿಗಣಿಸಲಾಗಿದ್ದು ಸುಚಿತ್ರಾ ಕುಮಾರಿ ಕುಂದಾಪುರ ಪ್ರಥಮ ಸ್ಥಾನ ಪಡೆದರೆ, ಶಾಂತಾ ಪ್ರಭು ಗುಂಡ್ಮಿ ದ್ವಿತೀಯ ಸ್ಥಾನ ಪಡೆದರು. ಉಪ್ಪಿನಲ್ಲಿ ಬಣ್ಣದ ರಂಗೋಲಿ ರಚಿಸಿದ ಇನ್ನೋರ್ವ ಪ್ರತಿಭೆ ಶ್ರೀಮತಿ ಅಶ್ವಿನಿ ಪ್ರದೀಪ ರಾವ್ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾದರು.

ವಿದ್ಯಾರ್ಥಿಗಳ ವಿಭಾಗದಲ್ಲಿ ಚೈತ್ರಾ ಜಿ.ಎ. ಉಡುಪಿ ಪ್ರಥಮ, ಭಕ್ತಿ ಉಡುಪಿ ದ್ವಿತೀಯ, ನಿಖಿತಾ ಎನ್ ತೃತೀಯ ಸ್ಥಾನ ಪಡೆದರು ಹಾಗೂ ಮಸಾಲ ಪದಾರ್ಥಗಳನ್ನು ಉಪಯೋಗಿಸಿ ಸುಂದರ ರಂಗೋಲಿ ರಚಿಸಿದ ’ನಿಧಿ’ ಉದ್ಯಾವರ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾದರು. ಭಾಗವಹಿಸಿದ ಎಲ್ಲ ಕಲಾವಿದರಿಗೂ ಶಿಫಾರಸುಪತ್ರ ಹಾಗೂ ಗಣಪತಿ ರಂಗೋಲಿ ಪುಸ್ತಕ ಹಾಗೂ ಶ್ರೀ ವಿನಾಯಕ ಪ್ರಸಾದ ವಿತರಿಸಲಾಯಿತು.

ಮಸಾಲ ರಂಗೋಲಿ : ಮಸಾಲ ಪದಾರ್ಥಗಳನ್ನು ಉಪಯೋಗಿಸಿ ವಿದ್ಯಾರ್ಥಿ ವಿಭಾಗದಲ್ಲಿ ನಿಧಿ ಉದ್ಯಾವರ ರಚಿಸಿದ ರಂಗೋಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸುದರ್ಶನ ಚಕ್ರ : ರಂಗೋಲಿ ಪ್ರದರ್ಶನ ಆರಂಭಗೊಳ್ಳುವಾಗ ಎಲ್ಲಿಂದಲೋ ಬಂದಂತೆ ಆಗಮಿಸಿದ ಮಹೇಶ್ ಬೆಳಗಾಂ ದೇವಸ್ಥಾನದ ಎದುರು ಕ್ಷಣಮಾತ್ರದಲ್ಲಿ ಬ್ರಹತ್ ರಂಗೋಲಿಯನ್ನು ರಚಿಸಲು ಆರಂಭಿಸಿದರು. ಜನ ಆಶ್ಚರ್ಯದಿಂದ ನೋಡುತ್ತಿದ್ದಂತೆಯೇ ಸುಮಾರು 5 ಮೀ. ಉದ್ದದ ಹಾಗೂ 3 ಮೀ. ಅಗಲದ ರಂಗೋಲಿ ರಚಿಸಿ ಎಲ್ಲರ ಮೆಚ್ಚುಗೆಗೆ ಇವರು ಪಾತ್ರರಾದರು. ತನಗೆ ಶ್ರೀ ಕೃಷ್ಣನ ಅನುಗ್ರಹವಿದೆ ಎನ್ನುತ್ತ ಎಲ್ಲರ ಗೆಳೆಯರಾದವರು ಮಹೇಶ್.

Write A Comment