ಕನ್ನಡ ವಾರ್ತೆಗಳು

ಎಂಡೋ ಪೀಡಿತರು ಆರೋಗ್ಯ ಕೇಂದ್ರದಲ್ಲಿ ದೂರು ಸಲ್ಲಿಸಿ: ಜಿಲ್ಲಾಧಿಕಾರಿ

Pinterest LinkedIn Tumblr

Dc_Press_Meet_2

ಮ೦ಗಳೂರು, ನ.16: ಎಂಡೋಸಲ್ಫಾನ್ ಪೀಡಿತರು ತಮ್ಮ ಪಿಂಚಿಣಿ ಹಾಗೂ ಚಿಕಿತ್ಸೆ ಇತ್ಯಾದಿಗಳ ತೊಂದರೆಗಳಿಗೆ ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಲ್ಲಿ ತಿಳಿಸಬಹುದು ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಕಾರ್ಯನಿರ್ವಾಹಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಸಿಗೆ ಹಿಡಿದಿರುವ ಎಂಡೋಪೀಡಿತರ ಚಿಕಿತ್ಸೆಗೆ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ವಿಳಂಭವಿಲ್ಲದೆ ಈಗಾಗಲೇ ಒಪ್ಪಂದ ಮಡಿರುವ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುವಂತೆ ತಿಳಸಿದ ಅವರು, ಪಿಂಚಣಿಯನ್ನು ಕ್ಲಪ್ತಕಾಲಕ್ಕೆ ಪಾವತಿಯಾಗುವಂತೆ ಆರೋಗ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಒಟ್ಟು 2,639 ಎಂಡೋಪೀಡಿತರು ಪಿಂಚಣಿಯನ್ನು ಪಡೆದಿದ್ದು, ಅಕ್ಟೋಬರ್ ಮಾಹೆಯಲ್ಲಿ 2,440 ಎಂಡೋಪೀಡಿತರಿಗೆ ರೂ.63,49,500ಗಳನ್ನು ಪಿಂಚಿಣಿಯಾಗಿ ವಿತರಿಸಲಾಗಿದೆ. 199 ಎಂಡೋಪೀಡಿತರಿಗೆ ವಿವಿದ ತಾಂತ್ರಿಕ ಕಾಣಗಳಿಗಾಗಿ ಪಿಂಚಣಿಯನ್ನು ತಡೆಹಿಡಿಯಲಾಗಿದ್ದು, ಇದೀಗ ಅವರಿಗೂ ಪಿಂಚಣಿ ಕ್ಲಪ್ತ ಸಮಯದಲ್ಲಿ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ತಹಸೀಲ್ದಾರರು ತಿಳಿಸಿದರು.

ಬಂಟ್ವಾಳ, ಪುತ್ತೂರು, ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಹೆಚ್ಚಿಗೆ ಇರುವ ಎಂಡೋಪೀಡಿತರನ್ನು ಗುರುತಿಸಿ ಅವರಿಗೆ ಗ್ರಾಮ ಪಂಚಾಯತ್‌ಗಳಲ್ಲೇ ಪುನರ್ವಸತಿ ಕೇಂದ್ರಗಳನ್ನು ತೆರೆದು ಸೂಕ್ತ ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ರಾಮಕೃಷ್ಣ ರಾವ್, ಉಪವಿಭಾಗಾಧಿಕಾರಿ ಡಾ. ಅಶೋಕ್, ಎಂಡೋಪೀಡಿತರ ಸ್ವಯಂಸೇವಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Write A Comment