ಕನ್ನಡ ವಾರ್ತೆಗಳು

ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಯವಕರ ಮೇಲೆ ದುಷ್ಕರ್ಮಿಗಳಿಂದ ಸಮುದ್ರದಲ್ಲೇ ಹಲ್ಲೆ

Pinterest LinkedIn Tumblr

ಉಳ್ಳಾಲ, ನ.15: ಮೊಗವೀರಪಟ್ಣದ ಸಮುದ್ರ ತೀರದ ಬಳಿ ಪೊಲೀಸರನ್ನು ಕಂಡು ಹೆದರಿ ಸಮುದ್ರದಲ್ಲಿ ಈಜಿ ಪರಾರಿಯಾಗಲು ಯತ್ನಿಸಿದ ಮೂವರಿಗೆ ದೋಣಿಯಲ್ಲಿದ್ದ ದುಷ್ಕರ್ಮಿಗಳ ತಂಡವೊಂದು ದೊಣ್ಣೆಯಿಂದ ತಲೆಗೆ ಬಡಿದು ಹಲ್ಲೆ ನಡೆಸಿರುವ ಘಟನೆ ಶನಿವಾರ ನಡೆದಿದೆ. 

ಘಟನೆಯಿಂದಾಗಿ ಪರಿಸರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದ ಬಳಿಕ ಪೊಲೀಸರು ಬಿಗುಭದ್ರತೆ ಏರ್ಪಡಿಸಿದ್ದಾರೆ. ಉಳ್ಳಾಲಬೈಲು ನಿವಾಸಿ ಇಕ್ಬಾಲ್ ಎಂಬವರಿಗೆ ಶುಕ್ರವಾರ ತಂಡವೊಂದು ಕೋಟೆಪುರ ಬಳಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಎಸ್ಸೈ ಭಾರತಿ ನೇತೃತ್ವದ ಪೊಲೀಸ್ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿತ್ತು. ಇದಕ್ಕಾಗಿ ಹಲವರ ವಿಚಾರಣೆಯನ್ನು ನಡೆಸುತ್ತಿದ್ದರು.

ಈ ಸಂದರ್ಭ ಮೊಗವೀರಪಟ್ನದತ್ತ ತೆರಳಿದ್ದ ಪೊಲೀಸರ ತಂಡ ಸಮುದ್ರ ತೀರದಲ್ಲಿ ಕುಳಿತಿದ್ದ ಐದು ಮಂದಿಯನ್ನು ವಿಚಾರಣೆಗೆಂದು ಕರೆದಿದ್ದರು. ಇದರಿಂದ ಗಾಬರಿಗೊಂಡ ಮೂವರು ಯುವಕರು ಸಮುದ್ರಕ್ಕೆ ಜಿಗಿದು ಈಜುತ್ತಲೇ ತಪ್ಪಿಸಿಕೊಂಡಿದ್ದಾರೆ.

ಪೊಲೀಸರನ್ನು ಕಂಡು ಪರಾರಿಯಾದ ಮೂರು ಮಂದಿ ಈಜುತ್ತಾ ಕ್ರಮಿಸಿದ್ದರು. ಆಗ ದೋಣಿಯಲ್ಲಿದ್ದ ತಂಡವೊಂದು ಮರದ ದೊಣ್ಣೆಯಿಂದ ಮೂವರಿಗೆ ತಲೆಗೆ ಹೊಡೆದಿದೆ. ಗಾಯಗೊಂಡು ಸಮುದ್ರದಲ್ಲೇ ಬೊಬ್ಬೆ ಹಾಕಲು ಶುರು ಮಾಡಿದ ಯುವಕರನ್ನು ಸ್ಥಳೀಯರು ಸಮುದ್ರದಿಂದ ದಡಕ್ಕೆ ಸೇರಿಸಿದ್ದಾರೆ.

ಯುವಕರಿಗೆ ದೋಣಿಯಲ್ಲಿ ಹಲ್ಲೆ ನಡೆಸಿ ಪರಾರಿಯಾದವರನ್ನು ಕೋಸ್ಟ್‌ಗಾರ್ಡ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Write A Comment