ಕನ್ನಡ ವಾರ್ತೆಗಳು

ನ.14 : ನವೀಕೃತ ಪುರಭವನ ಉದ್ಘಾಟನೆ.

Pinterest LinkedIn Tumblr

Mcc_mayer_photo_1

ಮಂಗಳೂರು, ನ.12 : ನಗರದ ನವೀಕೃತ ಪುರಭವನ ಉದ್ಘಾಟನೆ ನ.14ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 458.05 ಲಕ್ಷ ರೂ. ವೆಚ್ಚದಲ್ಲಿ ಪುರಭವನ ನವೀಕರಣ ಕಾರ್ಯ ನಡೆದಿದ್ದು, ಡಿಸೆಂಬರ್ ತಿಂಗಳ ಆರಂಭದಿಂದ ವಿವಿಧ ಕಲಾ ಕಾರ್ಯಕ್ರಮಗಳಿಗೆ ಅವಕಾಶವನ್ನು ನೀಡಲಾಗುವುದು ಎಂದರು. ಪುರಭವನದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಒಳಾಂಗಣದಲ್ಲಿ ಉತ್ಕೃಷ್ಟ ದರ್ಜೆಯ ಕಲಾ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ದುರಸ್ತಿ ಹಾಗೂ ಉನ್ನತೀಕರಣ ಕಾರ್ಯ ನಡೆದಿದೆ.

ಒಳಾಂಗಣದಲ್ಲಿ ಅಕಾಸ್ಟಿಕ್, ಫಾಲ್‌ಸೀಲಿಂಗ್, ಧ್ವನಿ ಬೆಳಕು ಮತ್ತು ವೇದಿಕೆ, ಆಸನಗಳ ಅಳವಡಿಕೆ, ಜನರೇಟರ್ ಮತ್ತು ವಿದ್ಯುದೀಕರಣ ಕಾಮಗಾರಿ ನಡೆದಿದೆ. ಕಾಮಗಾರಿ ಪ್ರಗತಿಯ ಸಂದರ್ಭ ಜಿಲ್ಲೆಯ ಮೇರು ಕಲಾವಿದರು, ವಿಶೇಷ ರಂಗತಜ್ಞರು ಪಾಲಿಕೆಯನ್ನು ಒತ್ತಾಯಿಸಿರುವ ಮೇರೆಗೆ ವಿಶಿಷ್ಟ ಹಾಗೂ ಆಧುನಿಕ ತಾಂತ್ರಿಕತೆಗೆ ಪೂರಕವಾದ ಸವಲತ್ತುಗಳನ್ನು ಒದಗಿಸಲಾಗಿದೆ. ವೇದಿಕೆಗೆ ಮರದ ಫ್ಲೋರಿಂಗ್ ಅಳವಡಿಸಿ ವಿಸ್ತರಣೆ, ಅತ್ಯಾಧುನಿಕ ಬೆಳಕು, ಧ್ವನಿ ಮತ್ತು ಗ್ರೀನ್ ರೂಂನಲ್ಲಿ ಕಲಾವಿದರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಆಕರ್ಷಕ ಎಲ್‌ಇಡಿ ನಾಮಫಲಕ, ಗಾರ್ಡನಿಂಗ್, ಜಿಲ್ಲೆಯ ಸಾಂಸ್ಕೃತಿಕ ವೈಭವ ಸಾರುವ ಮ್ಯೂರೆಲ್ ಅಳವಡಿಕೆ ಮತ್ತು ಹೊರಾಂಗಣದಲ್ಲಿ ಅಗತ್ಯ ಕಾಮಗಾರಿ ನಡೆದಿದೆ ಎಂದರು.

ಕಲಾವಿದರು ಲೈಟಿಂಗ್, ಸೌಂಡ್ ವ್ಯವಸ್ಥೆಯನ್ನು ಹೊರಗಿನಿಂದ ಅಳವಡಿಸುವ ಅಗತ್ಯವಿರುವುದಿಲ್ಲ. ಎಸಿ ಸೌಲಭ್ಯ, ನಿರ್ವಹಣೆ ಸೇರಿದಂತೆ ಬೆಂಗಳೂರಿನ ಪುರಭವನ, ಕಲಾಚಿತ್ರಗಳ ಶುಲ್ಕವನ್ನು ಗಣನೆಗೆ ತೆಗೆದುಕೊಂಡು ಕಾರ್ಯಕ್ರಮ ನಡೆಸುವವರಿಗೆ ಹೊರೆಯಾಗದಂತೆ ನಗರದ ಪುರಭವನದ ಕಾರ್ಯಕ್ರಮಕ್ಕೆ ನೀಡುವ ಸಂದರ್ಭದ ಶುಲ್ಕವನ್ನು ಪರಿಷ್ಕರಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮೇಯರ್ ಪ್ರತಿಕ್ರಿಯಿಸಿದರು.

ಕಾನೂನು ಪ್ರಕಾರ ಕಾಮಗಾರಿ ಕೈಗೆತ್ತಿಕೊಳ್ಳಬೇಕಾದ ಕಾರಣ ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಗೋಷ್ಠಿಯಲ್ಲಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಆಯುಕ್ತ ಡಾ.ಗೋಪಾಲಕೃಷ್ಣ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರಿನಾಥ್, ಕೇಶವ್, ದೀಪಕ್ ಪೂಜಾರಿ, ಪ್ರಕಾಶ್ ಸಾಲ್ಯಾನ್, ಮನಪಾ ಸದಸ್ಯರಾದ ಅಪ್ಪಿಲತಾ ಉಪಸ್ಥಿತರಿದ್ದರು.
ಕೃಪೆ ವರದಿ : ವಾಭಾ

Write A Comment