ಕನ್ನಡ ವಾರ್ತೆಗಳು

ರಾಜಧರ್ಮ ಪಾಲಿಸಿದ ಆಡಳಿತಗಾರ ಟಿಪ್ಪು: ಸಚಿವ ರಮಾನಾಥ ರೈ.

Pinterest LinkedIn Tumblr

Tippu_congr_rai

ಮ೦ಗಳೂರು, ನ.12 : ಆಡಳಿತದಲ್ಲಿ ರಾಜಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ ಆಡಳಿತಗಾರ ಟಿಪ್ಪು ಸುಲ್ತಾನ್ ಆಗಿದ್ದಾರೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಡಳಿತದಲ್ಲಿ ನ್ಯಾಯ ನೀತಿಯನ್ನು ಜಾರಿಗೊಳಿಸುವಾಗ ಸರ್ವರಿಗೂ ಸಮನಾಗಿ ಅನ್ವಯವಾಗುವಂತೆ ಟಿಪ್ಪು ನೋಡಿಕೊಂಡರು. ಇದು ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ವ್ಯವಸ್ಥೆಗೆ ಮಾದರಿಯಾಯಿತು ಎಂದು ಸಚಿವರು ಹೇಳಿದರು. ಬ್ರಿಟೀಷರ ವಿರುದ್ಧದ ಹೋರಾಟವನ್ನು ತಿರುಚಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದ ಸಚಿವರು, ಈ ವರ್ಷದಿಂದ ಟಿಪ್ಪು ಜಯಂತಿ ಆಚರಣೆ ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದು ದಿಟ್ಟಹೆಜ್ಜೆಯಾಗಿದೆ ಎಂದರು.

ಶಾಸಕ ಬಿ.ಎ. ಮೊಹಿದೀನ್ ಬಾವಾ ಮಾತನಾಡಿ, ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಅನೇಕ ದೇವಸ್ಥಾನಗಳಿಗೆ, ಚರ್ಚ್‌ಗಳ ಅಭಿವೃದ್ಧಿಗೆ ಕೊಡುಗೆ ನೀಡಿದ ಅಪ್ರತಿಮ ಜಾತ್ಯಾತೀತ ಆಡಳಿತಗಾರನಾಗಿದ್ದಾನೆ ಎಂದರು.

ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಮಾತನಾಡಿ, ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡಿದ ಅಪ್ರತಿಮ ಯೋಧ. ಕೃಷಿ, ನೀರಾವರಿಗೆ ಟಿಪ್ಪು ನೀಡಿದ ಕೊಡುಗೆಯಿಂದ ಹಳೇ ಮೈಸೂರು ಪ್ರಾಂತ್ಯ ಕೃಷಿ ಹಾಗೂ ರೇಷ್ಮೆ ತೋಟಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿತು. ಬೆಂಗಳೂರಿನ ಲಾಲ್‌ಭಾಗ್ ಟಿಪ್ಪು ಕೊಡುಗೆಯಾಗಿದೆ ಎಂದರು.

ಟಿಪ್ಪು ಸುಲ್ತಾನ್ ಬಗ್ಗೆ ಪ್ರಧಾನ ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ಪ್ರಾಧ್ಯಾಪಕ ಬಾರ್ಕೂರು ಉದಯ, ರಾಜ್ಯದ ಕರಾವಳಿಯ ಅನೇಕ ದೇಗುಲಗಳಲ್ಲಿ ಟಿಪ್ಪು ಕೊಡುಗೆಗಳನ್ನು ಈಗಲೂ ಕಾಣಬಹುದು. ಬ್ರಿಟೀಷರು ತಮ್ಮ ವಿರುದ್ಧ ಹೋರಾಡಿದ ದೇಶೀಯ ಹೋರಾಟಗಾರರ ಚರಿತ್ರೆಯನ್ನು ತಿರುಚಿದರು. ಇದರಿಂದಾಗಿಯೇ ಇಂದು ಅನೇಕ ಸ್ವಾತಂತ್ರ್ಯ ಹೋರಾಟ ಗಾರರ ಚರಿತ್ರೆ ಅಪನಂಬಿಕೆ ಸೃಷ್ಟಿಸಿದೆ ಎಂದರು. ಅಂದು ಇಡೀ ಯುರೋಪಿನಲ್ಲಿ ಟಿಪ್ಪು ಸೈನ್ಯ ಅತ್ಕ್ರುಷ್ಟವಾಗಿತ್ತು. ಮಿಲಿಟರಿಯಲ್ಲಿ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಗುಡಿ ಕೈಗಾರಿಕೆಗಳಿಗೆ ಚಾಲನೆ ನೀಡಿದ್ದು ಟಿಪ್ಪು ಅತ್ಯುನ್ನತ ಸಾಧನೆಯಾಗಿದೆ ಎಂದು ಬಾರ್ಕೂರು ಉದಯ ತಿಳಿಸಿದರು.

ಶಾಸಕ ಐವನ್ ಡಿ’ಸೋಜಾ ಮಾತನಾಡಿದರು. ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೃಪಾ ಅಮರ್‌ಆಳ್ವ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಹನೀಫ್ , ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಪೋಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ, ಡಿಸಿಪಿ ಶಾಂತರಾಜು, ಮಹಾನಗರಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಉಸ್ಮಾನ್ ಸ್ವಾಗತಿಸಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಕುಮಾರ್ ವಂದಿಸಿದರು.

Write A Comment