ಕನ್ನಡ ವಾರ್ತೆಗಳು

ಕರುವಿನ ಬಲಿ ಪಡೆದ ಬಸ್ಸಿನ ಮೇಲೆ ಉಗ್ರಕೋಪ :ನೊಂದ ಹಸುವಿನಿಂದ ಬಸ್ಸಿಗೆ ತಲೆ ಅಡ್ಡ ಇಟ್ಟು ಆಕ್ರೋಶ

Pinterest LinkedIn Tumblr

shirasi_bus_cow

ಶಿರಸಿ(ಉತ್ತರ ಕನ್ನಡ): ತನ್ನ ಕರುಳ ಕುಡಿಯನ್ನು ಬಲಿ ಪಡೆದ ಬಸ್ಸಿನ ಮೇಲೆ ಆ ಹಸುವಿಗೆ ಉಗ್ರಕೋಪ. ಆ ಬಸ್ಸನ್ನು ಕಂಡ ಕೂಡಲೇ ಅಡ್ಡಹಾಕುವ ಆಕಳು, ಚಕ್ರಕ್ಕೆ ತಲೆ ಅಡ್ಡ ಇಟ್ಟು ಆಕ್ರೋಶ ವ್ಯಕ್ತಪಡಿಸುತ್ತದೆ ಎಂದರೆ ನಂಬುವಿರಾ?

ನಂಬಲೇಬೇಕು. ನಗರದ ಶಿವಾಜಿ ಚೌಕದಲ್ಲಿ ಶನಿವಾರ ಬೆಳಗ್ಗೆ 7.45ಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ಸನ್ನು ಅಡ್ಡಗಟ್ಟಿದ ಹಸು, ಮುಂದೆ ಹೋಗದಂತೆ ಪ್ರತಿಭಟಿಸಿದೆ. ಇದರಿಂದ ಕುತೂಹಲಗೊಂಡ ಚಾಲಕ ಬಸ್ಸನ್ನು ನಿಲ್ಲಿಸಿ ಆಕಳನ್ನು ಓಡಿಸುವ ಪ್ರಯತ್ನಿಸಿದ. ಹೆದರಿ ದೂರ ಹೋದರೂ ಚಾಲಕ ಬಸ್ ಏರುತ್ತಿದ್ದಂತೆಯೇ ಆಕಳು ಮತ್ತೆ ಬಸ್ ಮುಂದೆ ಹಾಜರಾಗುತ್ತಿತ್ತು. ಶಿವಾಜಿ ಚೌಕದಿಂದ ಬಸ್ ನಿಲ್ದಾಣದವರೆಗೆ ಬಸ್ಸನ್ನು ಚಲಾಯಿಸುವಷ್ಟರಲ್ಲಿ ಚಾಲಕ ಹೈರಾಣಾಗಿ ಹೋಗಿದ್ದ.

ಆಗಿದ್ದೇನು?

ಆಕಳು ಬಸ್ಸನ್ನು ಅಡ್ಡಗಟ್ಟಿದ್ದು ಇದೇ ಮೊದಲ ಬಾರಿಯೇನೂ ಅಲ್ಲ. ಸ್ಥಳೀಯ ಮಹೇಶ ನಾಯ್ಕ ಹೇಳುವಂತೆ ಕಳೆದ ನಾಲ್ಕು ವರ್ಷಗಳಿಂದ ಹಸು ಈ ರೀತಿ ವರ್ತಿಸುತ್ತಿದೆ. ಶಿರಸಿ ವಿಭಾಗಕ್ಕೆ ಸೇರಿದ(ಕೆಎ 31, ಎಫ್ 857) ಬಸ್ಸನ್ನು ಮಾತ್ರ ಈ ಆಕಳು ಅಡ್ಡ ಹಾಕುತ್ತದೆ. ನಾಲ್ಕು ವರ್ಷಗಳ ಹಿಂದೆ ಇಲ್ಲಿಯ ಕಾಮತ್ ಹೋಟೆಲ್ ಬಳಿ ಈ ಆಕಳಿನ ಕರು ಬಸ್ಗೆ ಸಿಲುಕಿ ಅಸುನೀಗಿತ್ತು. ಬಳಿಕ ಆಕಳು ಈ ಬಸ್ಸನ್ನು ಕಂಡರೆ ತನ್ನ ಆಕ್ರೋಶ ವ್ಯಕ್ತಪಡಿಸುತ್ತಿದೆ. ಆಕಳ ಮಾಲೀಕರು ಯಾರು ಎಂಬುದೂ ತಿಳಿದಿಲ್ಲ.

ಶಿರಸಿ ವಿಭಾಗದ ಬಸ್ಸನ್ನು ಯಲ್ಲಾಪುರ ವಿಭಾಗಕ್ಕೆ ಕೆಲ ತಿಂಗಳ ಹಿಂದೆ ನೀಡಲಾಗಿತ್ತು. ಬಸ್ ಹಳೆಯದಾಗಿದ್ದರಿಂದ ಬಸ್ಸಿಗೆ ಹೊಸದಾಗಿ ಬಣ್ಣ ಬಳಿದು ರಿಪೇರಿಯನ್ನೂ ಮಾಡಲಾಗಿದೆ. ಆದರೂ ಆಕಳು ಈ ಬಸ್ಸನ್ನು ಎಲ್ಲೇ ಕಂಡರೂ ಪತ್ತೆಹಚ್ಚುತ್ತಿದೆ. ಮುಂದೆ ಹೋಗದಂತೆ ತಡೆಯುತ್ತಿದೆ.

Write A Comment