ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ವ್ಯವಸ್ಥೆಯ ಜನವಿರೋಧಿ ನೀತಿಗಳ ವಿರುದ್ಧ ಕೊಲ್ಲೂರು ರಕ್ಷಣಾ ವೇದಿಕೆ ಮತ್ತು ಪ್ರಜ್ಞಾವಂತ ನಾಗರಿಕರಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಹಾಗೇ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂಪ್ರೇರಿತರಾಗಿ ಮುಚ್ಚುವ ಮೂಲಕ ಪ್ರತಿಭಟನೆಗೆ ಸಾಥ್ ನೀಡಿದ್ದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಲ್ಲೂರು ರಕ್ಷಣಾ ವೇದಿಕೆ ಅಧ್ಯಕ್ಷ ಸಂದೀಪ್ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವಂತಹ ಕೊಲ್ಲೂರು ಶ್ರೀ. ಮೂಕಾಂಬಿಕೆಯ ಆರ್ಶೀವಾದಾನುಗ್ರಹಗಳಿಂದ ಭಕ್ತರ ಆಕರ್ಷಣೆಗೆ ತಾಣವಾಗಿ ವಿಶ್ವ ಪ್ರಸಿದ್ಧಿ ಹೊಂದಿರುವ ಈ ದೇವಳವು ಕರ್ನಾಟಕದ ಅತ್ಯಂತ ಶ್ರೀಮಂತ ದೇವಳಗಳಲ್ಲಿ ಒಂದಾಗಿದ್ದು ಮುಜರಾಯಿ ಇಲಾಖೆಗೆ ಸೇರಿರುತ್ತದೆ. ಇತ್ತೀಚಿನ ದಿನಗಳಲ್ಲಿ ಶ್ರೀ. ದೇವಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವಿಷಾದನೀಯ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಾರೀಕರಣ ನಡೆಯುತ್ತಿದ್ದು ದೇವರ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳು, ವಂಚನೆಗಳ ವಿರುದ್ಧ ನಾವು ಸೆಟೆದುನಿಂತಿದ್ದೇವೆ. ನಮ್ಮ ಹೋರಾಟವೇನಿದ್ದರೂ ಅವ್ಯವಸ್ಥಿತ ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧವೇ ಹೊರತು ಯಾರೊಬ್ಬರ ವಿರುದ್ಧವಾಗಿಯೂ ಅಲ್ಲ. ನಾವು ಭಯಪಡುವುದು ತಾಯಿ ಮೂಕಾಂಬಿಕೆ ಹಾಗೂ ವೀರಭದ್ರ ದೇವರಿಗೆ ಹೊರತು ಯಾವುದೇ ಆಡಳಿತ ಮಂಡಳಿಗಲ್ಲ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯಲ್ಲಿರುವ ಒಂಬತ್ತು ಸ್ಥಾನಗಳಲ್ಲಿ 7-8 ಜನರು ಪರ ಊರಿನವರೇ ಸದಸ್ಯರಾಗಿದ್ದಾರೆ. ಸರಕಾರ ಈ ಬಗ್ಗೆ ಗಮನ ವಹಿಸಬೇಕು, ಊರಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿರುವ ಮಂದಿಯೇ ಆಡಳಿತ ಮಂಡಳಿ ಸ್ಥಾನವನ್ನು ಅಲಂಕರಿಸಿದರೇ ದೇವಸ್ಥಾನದ ವತಿಯಿಂದ ಊರಿಗೆ ಒಳಿತು ಎಂಬುದನ್ನು ಅರಿಯಬೇಕಿದೆ ಎಂದರು. ಅವಿದ್ಯಾವಂತರಿಗೆ ದೇವಸ್ಥಾನದಲ್ಲಿ ಕೆಲಸ ಸಿಗುತ್ತಿದೆ ಆದರೇ ವಿದ್ಯಾವಂತ ಯುವಕ ಯುವತಿಯರಿಗೆ ದೇವಸ್ಥಾನದಲ್ಲಿ ಯಾವ ಕೆಲಸ ಸಿಗುತ್ತಿಲ್ಲ. ಇನ್ನಾದರೂ ದೇವಸ್ಥಾನ ಆಡಳಿತ ಮಂಡಳಿ ಸ್ವಹಿತಾಸಕ್ತಿ ಬಿಡಬೇಕಿದೆ ಎಂದು ಆಗ್ರಹಿಸಿದ್ದಲ್ಲದೇ ಇಂತಹ ಘಟನೆಗಳು ಮರುಕಳಿಸಿದರೇ ಮುಂದಿನ ದಿನದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿಯೂ ತಿಳಿಸಿದರು.
ಗೆಲ್ಲುವ ಕುದುರೆಯನ್ನು ಏರುವ ಮಂದಿ ಬಹಳಷ್ಟಿದ್ದಾರೆ, ದೇವಸ್ಥಾನದ ವೈಭವ ಹಾಗೂ ಸಂಪತ್ತನ್ನು ಉದ್ದೇಶವಾಗಿಟ್ಟುಕೊಳ್ಳುವುದನ್ನು ಬಿಟ್ಟು ಊರಿನತ್ತವೂ ಕಾಳಜಿ ವಹಿಸಿ, ಊರಿಗೆ ಬೇಕಾಗಿರುವ ಹತ್ತು ಹಲವು ಸೌಕರ್ಯಗಳನ್ನು ದೇವಸ್ಥಾನದ ವತಿಯಿಂದ ಒದಗಿಸುವ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಕೊಲ್ಲೂರಿನ ಪ್ರತಿ ಮನೆಯಲ್ಲೂ ದೇವಸ್ಥಾನದ ಆಡಳಿತ ಮಂಡಳಿ ಬಗ್ಗೆ ಬೇಸರವಿದೆ. ಆಡಳಿತ ವ್ಯವಸ್ಥೆ ಎಲ್ಲರಿಗೂ ಮಾದರಿಯಾಗಬೇಕೆ ಹೊರತು ಜನರಿಂದ ಹೇಳಿಸಿಕೊಳ್ಳುವಂತಿರಬಾರದು. ಇಲ್ಲಿನ ಅವ್ಯವಸ್ಥೆಯಿಂದಾಗಿ ಉತ್ತರಖಾಂಡ್ ದುರಂತ ಕೊಲ್ಲೂರಿನಲ್ಲಿ ಆಗುವ ಭಯ ಜನರಲ್ಲಿದೆ. ಊರಿಗೋಸ್ಕರದ ಈ ಹೋರಾಟದಲ್ಲಿ ಯಾವ ರಾಜಕೀಯ ಹಸ್ತಕ್ಷೇಪವೂ ಇಲ್ಲ. ಭಕ್ತರಿಗೆ ಶಾಂತಿ ಸಿಗುವ ತಾಣ ದೇವಾಲಯವಾಗಿದ್ದು ಇಲ್ಲಿನ ಬರುವ ಭಕ್ತರಿಗೆ ಸಕಲ ಸೌಲಭ್ಯವನ್ನೂ ಒದಗಿಸುವ ಜವಬ್ದಾರಿಯನ್ನು ಇನ್ನಾದರೂ ಆಡಳಿತ ಮಂಡಳಿ ವಹಿಸಬೇಕು ಎಂದರು.
ಗ್ರಾಮ ಹಿತರಕ್ಷಣಾ ಸಮಿತಿಯ ಚಂದ್ರ ಬಳೆಗಾರ ಮಾತನಾಡಿ, ಕೊಲ್ಲೂರು ದೇವಳಕ್ಕೆ ಬರುವ ಬಡ ಭಕ್ತರಿಗೆ ಮೂಲಸೌಕರ್ಯ ಹಾಗೂ ವಸತಿ ಸೌಕರ್ಯ ಒದಗಿಸಬೇಕಾಗಿದೆ, ಆದರೇ ದೇವಸ್ಥಾನದ ವಸತಿಗ್ರಹಗಳನ್ನು ಖಾಸಗಿಯವರಿಗೆ ನೀಡಲು ಹೊರಟಿರುವುದು ಸೂಕ್ತವಲ್ಲ. ಈ ಬಗ್ಗೆ ಈಗಾಗಲೇ ಸಂಬಂದಪಟ್ಟವರಿಗೆ ಮನವಿ ನೀಡಲಾಗಿದೆ. ಖಾಸಗಿಯವರು ಇಲ್ಲಿ ವಸೂಲಿ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಿದೆ. ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಇಲ್ಲಿ ಯಾವ ಸೌಲಭ್ಯವೂ ಇಲ್ಲ, ಬಸ್ಸು ನಿಲ್ದಾಣ ಸೇರಿದಂತೆ ಇಲ್ಲಿರುವ ಎಲ್ಲಾ ಶೌಚಾಲಯಗಳಲ್ಲಿಯೂ ಹಣ ಪಡೆಯುವ ಸ್ಥಿತಿಯಿದೆ, ಇನ್ನು ಸೌಪರ್ಣಿಕಾ ನದಿಯು ಮಲೀನಗೊಂಡಿದ್ದು ಅದನ್ನು ಶುಚಿತ್ವಗೊಳಿಸುವ ಕಾರ್ಯವೂ ನಡೆಯಬೇಕಿದೆ. ದೇವಸ್ಥಾನವು ಪ್ರಗತಿಯ ಉತ್ತುಂಗಕ್ಕೇರಿದರೆ ಅದರ ಪ್ರಯೋಜನ ಊರಿಗೆ ಹಾಗೂ ಊರ ಜನತೆಗೆ ದೊರಕಬೇಕು. ಈ ಊರಿನ ಪ್ರತಿಯೊಂದು ಜೀವಜಾಲವೂ ದೇವಸ್ಥಾನವನ್ನೇ ಅವಲಂಬಿಸಿದೆ. ದೇವಿ ದರ್ಶನಾರ್ಥ ಇಲ್ಲಿಗೆ ಬರುವ ಭಕ್ತರಿಗೆ ಬೇಕಾದ ಎಲ್ಲ ಅವಶ್ಯ ಸೌಕರ್ಯಗಳನ್ನು ಒದಗಿಸಿ ಭಕ್ತರನ್ನು ಆಕರ್ಷಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ, ತಾಲೂಕು ಪಂಚಾಯತ್ ಸದಸ್ಯ ರಮೇಶ್ ಗಾಣಿಗ, ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಅಡಿಗ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ಸಂದರ್ಭ ರಕ್ಷಣಾ ವೇದಿಕೆಯ ಹರೀಶ್ ತೋಳಾರ್, ಆಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷ ನಾಗೇಶ್ ದಳಿ, ಎಸ್. ಕುಮಾರ್ ಮೊದಲಾದವರಿದ್ದರು.
ಕೊಲ್ಲೂರು ರಕ್ಷಣಾ ವೇದಿಕೆ ಮತ್ತು ಪ್ರಜ್ಞಾವಂತ ನಾಗರಿಕರು ಮನವಿ ಏನು?:
ವ್ಯಾಪಾರೀಕರಣ : ಶ್ರೀ. ಕ್ಷೇತ್ರದ ಹಾಗೂ ಭಕ್ತರ ಹಿತವನ್ನು ಕಡೆಗಣಿಸಿ ಶ್ರೀ. ಕ್ಷೇತ್ರವನ್ನು ವ್ಯಾಪಾರೀಕರಣ ಮಾಡಿಕೊಂಡಿರುವುದನ್ನು ಕೂಡಲೇ ನಿಲ್ಲಿಸಬೇಕು.
ಸೇವಾ ದರಗಳ ಹೆಚ್ಚಳ : ಶ್ರೀ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಂದ ಶ್ರೀ. ದೇವಿಗೆ ನಡೆಸಲ್ಪಡುವ ಸೇವೆಗಳಿಗೆ ದುಪ್ಪಟ್ಟು ಹಣವನ್ನು ವಸೂಲಿ ಮಾಡದೇ ಭಕ್ತರ ಕೈಗೆಟುಕುವ ದರದಲ್ಲಿ ಸೇವೆಗಳು ನಡೆಸುವಂತಾಗಬೇಕು.
ದೇವಸ್ಥಾನದ ಅತಿಥಿ ಗೃಹಗಳ ಖಾಸಗೀಕರಣ : ಶ್ರೀ. ದೇವಳಕ್ಕೆ ಬರುವ ಭಕ್ತಾಧಿಗಳಿಗೆ ಊಟೋಪಚಾರ, ವಸತಿಗೃಹಗಳು, ಶೌಚಾಲಯಗಳ ಸೌಲಭ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕಾದ ದೇವಳದ ಆಡಳಿತ ಮಂಡಳಿಯೇ ದೇವಳದ ವಸತಿಗೃಹಗಳನ್ನು ಟೆಂಡರ್ ಕರೆದು ಖಾಸಗಿಯವರಿಗೆ ವಹಿಸಿಕೊಡುತ್ತಿರುವುದು ಭಕ್ತಾಧಿಗಳ ಹಿತದೃಷ್ಟಿಯಿಂದ ಸರಿಯಲ್ಲ. ಆದುದರಿಂದ ನಡೆದಿರುವ ಎಲ್ಲ ಟೆಂಡರ್ ಗಳನ್ನು ರದ್ದುಗೊಳಿಸಬೇಕು.
ಆಡಳಿತ ಮಂಡಳಿಯಲ್ಲಿ ಸ್ಥಳೀಯರಿಗೆ ಅವಕಾಶ : ಸ್ಥಳೀಯರಲ್ಲದ ಆಡಳಿತ ಮಂಡಳಿಯವರಿಂದ ಕೊಲ್ಲೂರಿಗೆ ಸ್ಥಳೀಯವಾಗಿ ಯಾವುದೇ ಪ್ರಯೋಜನವಾಗಿರುವುದಿಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯಲ್ಲಿ ಕೊಲ್ಲೂರಿನ ಅಭಿವೃದ್ಧಿಗೆ ಊರ ಸಮಸ್ಯೆಗಳ ಅರಿವು ಮತ್ತು ಕಾಳಜಿ ಇರುವ ನಮ್ಮದೇ ಗ್ರಾಮದ ಹೆಚ್ಚಿನ ಸದಸ್ಯರಿಗೆ ಅವಕಾಶ ನೀಡುವಂತೆ ಚಿಂತನೆ ನಡೆಯಬೇಕು.
ನೇಮಕಾತಿಗಳಲ್ಲಿ ಅವಗಣನೆ : ಸ್ಥಳೀಯವಾಗಿ ವಿದ್ಯಾವಂತ ಯುವಕ, ಯುವತಿಯರಿದ್ದು ಶ್ರೀ. ದೇವಳದಲ್ಲಿ ನಡೆಯುವ ಉದ್ಯೋಗ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು.
ಸೆಕ್ಯೂರಿಟಿ ಮತ್ತು ದಿನಗೂಲಿ ನೌಕರರ ಗುತ್ತಿಗೆ : ಸೆಕ್ಯೂರಿಟಿ ಮತ್ತು ದಿನಗೂಲಿ ನೌಕರರನ್ನು ಗುತ್ತಿಗೆಯಾಗಿ ತೆಗೆದುಕೊಳ್ಳುವುದನ್ನು ಬಿಟ್ಟು ದೇವಸ್ಥಾನದ ವತಿಯಿಂದಲೇ ನೇಮಿಸಿಕೊಳ್ಳುವಂತಾಗಬೇಕು.
ಕಳಪೆ ಕಾಮಗಾರಿಗಳ ತನಿಖೆ : ದೇವಳದ ವತಿಯಿಂದ ನಡೆದಿರುವ ಪ್ರತಿಯೊಂದು ಕಾಮಗಾರಿಗಳು ಅತ್ಯಂತ ಕಳಪೆಮಟ್ಟದ್ದಾಗಿದೆ ಮತ್ತು ಪಾರದರ್ಶಕವಾಗಿಲ್ಲ. ಕೆಲವೊಂದು ಕಾಮಗಾರಿಗಳು ಭಕ್ತರಿಗಾಗಲಿ, ಊರಿಗಾಗಲಿ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಆದುದರಿಂದ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಯಾಗಬೇಕು.























