ಮಂಗಳೂರು : ಓಲಾ ಸಂಸ್ಥೆ ಚಾಲಕರಿಗೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಆನ್ ಲೈನ್ ಟ್ಯಾಕ್ಸಿ ಆ್ಯಂಡ್ ಡ್ರೈವರ್ಸ್, ಓನರ್ಸ್ ಅಸೋಸಿಯೇಶನ್ ಸದಸ್ಯರು ಶುಕ್ರವಾರ ನಗರದ ಪಿವಿಎಸ್ ವೃತ್ತದ ಬಳಿಯ ಮಾನಸ ಟವರ್‌ನಲ್ಲಿ ಕಾರ್ಯಾನಿರ್ವಾಹಿಸುತ್ತಿರುವ ಓಲಾ ಸಂಸ್ಥೆಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಆನ್ ಲೈನ್ ಟ್ಯಾಕ್ಸಿ ಆ್ಯಂಡ್ ಡ್ರೈವರ್ಸ್, ಓನರ್ಸ್ ಅಸೋಸಿಯೇಶನ್ ಸದಸ್ಯ ಬಿ.ಕೆ. ಇಮ್ತಿಯಾಝ್ ಅವರು ಮಾತನಾಡಿ, ಓಲಾ ಕಂಪೆನಿಯು ಮಂಗಳೂರಿನಲ್ಲಿ 9 ತಿಂಗಳ ಹಿಂದೆ ಕಾರ್ಯಾರಂಭವಾಗಿದೆ. 6 ತಿಂಗಳು ಚಾಲಕ / ಮಾಲಕರ ಶ್ರಮಕ್ಕೆ ತಕ್ಕಂತೆ ಉತ್ತಮ ಮೊಲ್ಯವನ್ನು ನೀಡಿತ್ತು.
ಆದರೆ ಇದೀಗ ಓಲಾ ಆಪರೇಟರ್ ಗಳಿಗೆ ಅನ್ಯಾಯ ಮಾಡುತ್ತಿದ್ದು, 3 ವರ್ಷಗಳ ಒಪ್ಪಂದವನ್ನು ಮುರಿದಿದ್ದಾರೆ. ಇದರಿಂದ ನಮಗೆ ನಷ್ಟವಾಗುತ್ತಿದ್ದು, ನ್ಯಾಯ ಒದಗಿಸಲು ಒತ್ತಾಯಿಸಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರತಿಫಲ ದೊರೆತಿಲ್ಲ ಎಂದು ಆರೋಪಿಸಿದರು.
ಕಂಪೆನಿಯು ಓಲಾ ಚಾಲಕರ ಬೇಡಿಕೆಗಳಿಗೆ ಉದ್ಧಟತನದ ಪ್ರತಿಕ್ರಿಯೆ ನೀಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೂ ನಾವು ಮನವಿ ಮಾಡಿದ್ದೇವೆ. ಅವರು ಕಂಪೆನಿಗೆ ಛೀಮಾರಿ ಹಾಕಿ, ತಪ್ಪನ್ನು ತಿದ್ದಿಕೊಳ್ಳುವಂತೆ ಎಚ್ಚರಿಸಿದೆ. ಈ ಘಟನೆ ನಡೆದು ಎರಡು ದಿನಗಳಾದರೂ ಕಂಪೆನಿಯ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ದೂರಿದರು.
ದರಗಳು ಏಕಾಏಕಿ ಬದಲಾವಣೆಯಾಗುತ್ತಿವೆ. ಇದರಿಂದಾಗಿ ನಾವು ತೊಂದರೆಗೊಳಗಾಗಿದ್ದೇವೆ. ಕಂಪೆನಿ ನಮ್ಮೊಂದಿಗೆ ಮಾತುಕತೆಗೆ ನಿರಾಕರಿಸುತ್ತಿದೆ. ಓಲಾ ಕಂಪೆನಿ ನಮ್ಮನ್ನು ಬೀದಿಪಾಲು ಮಾಡಿದೆ. ಇದು ವಂಚಕರ ಕಂಪೆನಿಯಾಗಿದೆ. ನಾವು ಇದಕ್ಕಾಗಿ ಮಾಡಿದ ಸಾಲದ ಮರು ಪಾವತಿಯನ್ನು ಓಲಾ ಕಂಪೆನಿಯೇ ವಹಿಸಬೇಕು ಎಂದು ಅವರು ಆಗ್ರಹಿಸಿದರು.





