ಮಂಗಳೂರು: “ಸತ್ತವರ ಮನೆಗೆ ಹೋಗೋದೊಂದೇ ಕೆಲಸವಲ್ಲ” ಎಂಬ ಸಚಿವ ಯು.ಟಿ.ಖಾದರ್ ಅವರ ಅಮಾನವೀಯ ಹೇಳಿಕೆ ಬಹುಸಂಖ್ಯಾತರ ಜೀವದ ಬಗ್ಗೆ ತಮ್ಮ ಸರ್ಕಾರ ಯಾವ ನಿಲುವನ್ನು ಹೊಂದಿದೆ ಎಂಬುದರ ಪ್ರತಿಬಿಂಬ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಹೇಳಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ್ದ ಪ್ರಶಾಂತ್ ಪೂಜಾರಿಯ ಹತ್ಯೆಯನ್ನು “ಅವರವರೇ ಹೊಡೆದಾಡಿಕೊಂಡು ಸತ್ತಿದ್ದಾರೆ” ಎಂದು ಅತ್ಯಂತ ನಿರ್ಲಕ್ಷ್ಯತೆಯಿಂದ ಹೇಳಿರುವುದನ್ನು ಗಮನಿಸಿದರೆ, ಸರಕಾರವು ಈ ಪ್ರಕರಣದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದು, ಪ್ರಕರಣವನ್ನು ತಿರುಚುವ ಅಥವಾ ಮುಚ್ಚಿ ಹಾಕುವ ಸಂಭವಗಳು ಹೆಚ್ಚಿದೆ ಎಂಬುದು ಸ್ಪಷ್ಟವಾಗುತ್ತದೆ.
ಪ್ರಶಾಂತ್ ಹತ್ಯೆಯ ಆರೋಪದಲ್ಲಿ ಬಂಧಿತನಾಗಿರುವ ಓರ್ವ ವ್ಯಕ್ತಿಯೊಟ್ಟಿಗೆ ಮೂಡಬಿದ್ರೆಯ ಶಾಸಕ ಹಾಗೂ ಸಚಿವ ಅಭಯಚಂದ್ರ ಜೈನ್ ಭಾವಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾದರೂ, ಸಚಿವರು ಇದರ ಬಗ್ಗೆ ಸ್ಪಷ್ಟೀಕರಣ ಕೊಡದೆ ಇರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಪ್ರಶಾಂತ್ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಸರ್ಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಖಾದರ್, ಪ್ರಶಾಂತ್ ಹತ್ಯೆಯ ತನಿಖೆಯನ್ನು ಸರಕಾರವು ನಿಷ್ಪಕ್ಷಪಾತವಾಗಿ ನಡೆಸಿ ನ್ಯಾಯ ಒದಗಿಸಬಹುದು ಎಂಬಂತೆ ಕಾಣುತ್ತಿಲ್ಲವಾದ್ದರಿಂದ ಸರಕಾರ ಈ ಕೂಡಲೇ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಬೇಕು ಹಾಗೂ ಸಚಿವ ಅಭಯಚಂದ್ರ ಜೈನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
ಇದೇ ರೀತಿ ಜಿಲ್ಲೆಯಲ್ಲಿ ದಿನಂಪ್ರತಿ ಬಹುಸಂಖ್ಯಾತ ವರ್ಗಕ್ಕೆ ಸೇರಿದವರ ಮೇಲೆ ಆಕ್ರಮಣಗಳು, ಹಲ್ಲೆಗಳು ನಡೆಯುತ್ತಿದ್ದರೂ ಸರ್ಕಾರ ಮೌನ ವಹಿಸಿರುವುದನ್ನು ಗಮನಿಸಿದರೆ ಎಲ್ಲಾ ಕೃತ್ಯಗಳು ರಾಜಕೀಯ ಪ್ರೇರಿತ ಕೃತ್ಯಗಳಾಗಿರಬಹುದು ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ.
ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಂಡು, ತಪ್ಪಿತಸ್ಥರನ್ನು ಬಂಧಿಸಿ, ದುಷ್ಕರ್ಮಿ ಗಳನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾರ್ಯನಿರತವಾಗದಿದ್ದರೆ ಯುವಮೋರ್ಚಾ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಉಗ್ರ ಹೋರಾಟ ಪ್ರಾರಂಭಿಸಲಿದೆ ಎಂದು ಎಚ್ಚರಿಕೆ ನೀಡುವುದಾಗಿ ವಿಕಾಸ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
