ಕುಂದಾಪುರ: ಅಕ್ರಮ ಗೋಕಳ್ಳ ಸಾಗಣಿಕೆ ಹಾಗೂ ಕೋಮುಗಲಭೆ ಸೃಷ್ಟಿಸಿ ಶಾಂತಿಭಂಗ ಕೃತ್ಯ ನಡೆಸುತ್ತಿದ್ದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಯೋರ್ವನ ಮೇಲೆ ಗೂಂಡಾ ಕಾಯ್ದೆ ಜಾರಿಯಾಗಿದ್ದು ಆತನ ಬಂಧನವಾಗಿದೆ.
( ಮೊಹಮ್ಮದ್ ಹನೀಫ್)
ಗಂಗೊಳ್ಳಿ ನಿವಾಸಿ ಮೊಹಮ್ಮದ್ ಹನೀಫ್(38) ಗೂಂಡಾ ಕಾಯ್ದೆ ಜಾರಿಯನ್ವಯ ಬಂಧಿತನಾದ ಆರೋಪಿಯಾಗಿದ್ದಾನೆ. ಆತನನ್ನು ಸದ್ಯ ಗುಲ್ಬರ್ಗಾದ ಕಲ್ಬುರ್ಗಿಯ ಸೆಂಟ್ರಲ್ ಜೈಲಿಗೆ ರವಾನಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಗುಜ್ಜಾಡಿಯ ನಿವಾಸಿಯಾಗಿ ಪ್ರಸ್ತುತ ಗಂಗೊಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಮೊಹಮ್ಮದ್ ಹನೀಫ್ ಗಂಗೊಳ್ಳಿ ಭಾಗಗಳಲ್ಲಿ ಸದಾ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವನಾಗಿದ್ದಾನೆ. ಗಂಗೊಳ್ಳಿ ಪರಿಸರದಲ್ಲಿ ಕೋಮುಗಲಭೆ ನಡೆಸಿದ ಬಗ್ಗೆ ಹಾಗೂ ಅಕ್ರಮವಾಗಿ ಗೋಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಈತನ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 13 ಪ್ರಕರಣಗಳು ದಾಖಲಾಗಿತ್ತು. ಅವುಗಳ ಪೈಕಿ 5 ಪ್ರಕರಣಗಳಲ್ಲಿ ಸಣ್ಣ-ಪುಟ್ಟ ಶಿಕ್ಷೆಯನ್ನು ಅನುಭವಿಸಿದ್ದ ಈತನ ಉಳಿದ ಕೇಸುಗಳ ವಿಚಾರಣೆ ನಡೆಯುತ್ತಿದೆ. ಗಂಗೊಳ್ಳಿಯಲ್ಲಿ ಕಳೆದ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಈತ ಬಂಧಿತನಾಗಿದ್ದ ಬಳಿಕ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗಿದೆ.
(ಎಸ್ಪಿ ಕೆ. ಅಣ್ಣಾಮಲೈ)
ಪರೇಡಿಗೂ ಬಂದಿದ್ದ, ದನವನ್ನು ಕದ್ದ..!
ಜಿಲ್ಲಾದ್ಯಂತ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಗೋಕಳ್ಳತನ ಹಾಗೂ ಸಾಗಾಣಿಕೆ ತಡೆಗಟ್ಟುವಲ್ಲಿ ಒಂದೆರಡು ತಿಂಗಳ ಹಿಂದೆ ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ಗೋ ಕಳ್ಳರ ಪರೇಡ್ ನಡೆಸಲಾಗಿತ್ತು. ಅಂದು ನಡೆದ ಪರೇಡಿನಲ್ಲಿ ಬೈಂದೂರು ವೃತ್ತನಿರೀಕ್ಷಕ ಸುದರ್ಶನ್ ಹಾಗೂ ಗಂಗೊಳ್ಳಿ ಎಸ್ಸೈ ಸುಬ್ಬಣ್ಣ ಅವರು ಗೋಕಳ್ಳರಿಗೆ ಇಂತಹ ಕೃತ್ಯ ನಿಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದರು. ಆ ಪರೇಡಿನಲ್ಲಿ ಭಾಗಿಯಾಗಿ ತೆರಳಿದ್ದ ಹನೀಫ್ ತನ್ನ ಚಾಳಿ ಮುಂದುವರೆಸಿ ಅಂದು ರಾತ್ರಿಯೇ ಅಕ್ರಮವಾಗಿ ದನ ಸಾಗಿಸಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದ ಎನ್ನಲಾಗಿದೆ.
ಅಂತೂ ಜಾರಿಯಾಯ್ತು ಗೂಂಡಾ ಕಾಯ್ದೆ
ಈತನ ಮೇಲಿನ ಪ್ರಕರಣಗಳನ್ನು ಗಂಗೊಳ್ಳಿ ಠಾಣೆ ಎಸ್ಸೈ ಸುಬ್ಬಣ್ಣ ಅವರು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರಿಗೆ ವರದಿ ನೀಡಿದ್ದರು. ಹನೀಫ್ ಕುಕೃತ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು ಮೊಹಮ್ಮದ್ ಹನೀಫ್ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಈ ವರದಿ ಪರಿಶೀಲಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅವರು ಗೂಂಡಾ ಕಾಯ್ದೆ ಜಾರಿಗೊಳಿಸಿ ಆದೇಶ ನೀಡಿದ್ದಾರೆ. ಅದರಂತೆಯೇ ಆರೋಪಿಯನ್ನು ಬುಧವಾರ ಸಂಜೆ ವೇಳೆಗೆ ಗಂಗೊಳ್ಳಿ ಠಾಣೆ ಎಸ್ಸೈ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ತ್ರಾಸಿ ಸಮೀಪ ಬಂಧಿಸಿದ್ದಾರೆ.
ಗೂಂಡಾ ಕಾಯ್ದೆ ಸರತಿಯಲ್ಲಿ ಇನ್ನೂ ಮೂವರು..!
ಈತನಂತೆಯೇ ಗಂಗೊಳ್ಳಿ ಭಾಗಗಳಲ್ಲಿ ಕುಕೃತ್ಯ ನಡೆಸುವ ಇನ್ನೂ ಮೂವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆದರೇ ಆ ಮೂವರು ಯಾರೆಂಬ ಬಗ್ಗೆ ಮಾಹಿತಿಗಳು ಲಭಿಸಿಲ್ಲ. ಕಳೆದೊಂದು ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ಅಶಾಂತಿ ನಿರ್ಮಾಣಗೊಂಡಿತ್ತು, ಆ ಬಳಿಕ ಗಂಗೊಳ್ಳಿ ಪರಿಸರದಲ್ಲಿ ಕಟ್ಟೇಚ್ಚರ ವಹಿಸಿ ಘಟನೆಗಳು ಮರುಕಳಿಸದಂತೆ ಪೊಲೀಸರು ಶಿಸ್ತು ಕ್ರಮ ಕೈಗೊಂಡಿದ್ದರು.
1 ವರ್ಷ ಜೈಲು ವಾಸ ಖಾಯಂ?:
1985ರ ‘ಕರ್ನಾಟಕ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ’ (ಗೂಂಡಾ ಆಕ್ಟ್) ಅನ್ವಯ ಬಂಧಿತನಾದ ವ್ಯಕ್ತಿಗೆ ಒಂದು ವರ್ಷ ಜೈಲು ವಾಸ ಖಾಯಂ ಎನ್ನಲಾಗಿದೆ. ಸಾರ್ವಜನಿಕರ ನೆಮ್ಮದಿಗೆ ಕಂಠಪ್ರಾಯರಾಗಿ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ಗೂಂಡಾ ಕಾಯ್ದೆ ಹೇರುವಂತೆ ಪೊಲೀಸರು ವಿಸ್ತೃತವಾದ ವರದಿಯನ್ನು ತಯಾರಿಸಿ ಪೊಲೀಸ್ ವರಿಷ್ಠಾಧಿಕಾರಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ರವಾನಿಸುತ್ತಾರೆ. ಅದನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಕಾಯ್ದೆ ಜಾರಿಗೊಳಿಸುತ್ತಾರೆ.
ಜಿಲ್ಲೆಯಲ್ಲಿ ಈ ವರ್ಷದಲ್ಲಿ 2 ನೇ ಪ್ರಕರಣ
ಹಿರಿಯಡಕ ವ್ಯಾಪ್ತಿಯ ಪೆರ್ಣಂಕಿಲ ಗ್ರಾಮದ ವರ್ವಾಡಿಯ ಪ್ರವೀಣ ಕುಲಾಲ್ ಎಂಬಾತನ ಮೇಲೆ ಗೂಂಡಾ ಪ್ರವೃತ್ತಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಕಾರಣಕ್ಕಾಗಿ ಇದೇ ವರ್ಷ ಮಾರ್ಚಿನಲ್ಲಿ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿತ್ತು. ಅದನ್ನು ಹೊರತುಪಡಿಸಿದಂತೆ ಈ ವರ್ಷ ಜಿಲ್ಲೆಯಲ್ಲಿ ಎರಡನೇ ಗೂಂಡಾ ಪ್ರಕರಣ ಜಾರಿಯಾಗಿದ್ದು ಗಂಗೊಳ್ಳಿ ಹನೀಫ್ ಮೇಲೆ. ಸದ್ಯ ಈತನನ್ನು ಕಲ್ಬುರ್ಗಿ ಕೇಂದ್ರ ಕಾರಾಗ್ರಹಕ್ಕೆ ರವಾನಿಸಲಾಗಿದೆ ಎಂದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರು ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ. ಗಂಗೊಳ್ಳಿ ಹಾಗೂ ಕುಂದಾಪುರ ವ್ಯಾಪ್ತಿಯಲ್ಲಿ ಈವರೆಗೂ ಗೂಂಡಾ ಕಾಯ್ದೆ ಜಾರಿಯಾಗಿಲ್ಲ ಎನ್ನಲಾಗಿದೆ.
ವರದಿ- ಯೋಗೀಶ್ ಕುಂಭಾಸಿ


