ಪುತ್ತೂರು, ಅ.26: ಪ್ರತಿಷ್ಠಿತ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಪ್ರೈ.ಲಿ. ವತಿಯಿಂದ ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ‘ಇನ್‌ಲ್ಯಾಂಡ್ ಮಯೂರ’ ವಸತಿ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ರವಿವಾರ ಶಿಲಾನ್ಯಾಸ ನೆರವೇರಿತು.
ಮಂಗಳೂರಿನ ಅರ್ಚಕ ಗಿರಿಧರ ಭಟ್ ಶಿಲಾನ್ಯಾಸ ನೆರವೇರಿಸಿದರು. ಮುಹಮ್ಮದ್ ಕಾಮಿಲ್ ಸಖಾಫಿ ಪಾಣೆಮಂಗಳೂರು ದುಆ ನೆರವೇರಿಸಿದರು. ಮರೀಲ್ ಚರ್ಚ್‌ನ ಧರ್ಮಗುರು ಫಾ.ಫ್ರಾನ್ಸಿಸ್ ಅಸ್ಸಿಸ್ಸಿ ಡಿಅಲ್ಮೇಡ ಪ್ರಾರ್ಥಿಸಿದರು.
ನೂತನ ಸಂಕೀರ್ಣದ ಬ್ರೋಷರನ್ನು ಶಾಸಕಿ ಶಕುಂತಳಾ ಶೆಟ್ಟಿ, ನಾಯಕ್ ರೈ ಎಂಟರ್‌ಪ್ರೈಸಸ್‌ನ ಚಿಕ್ಕಪ್ಪನಾಯಕ್, ಉದ್ಯಮಿಗಳಾದ ಕೆ.ಪಿ.ಅಹ್ಮದ್ ಹಾಜಿ, ಆಕರ್ಷಣ್ ಬಂಟ್ವಾಳ್ ಸೇರಿದಂತೆ ಹಲವು ಗಣ್ಯರು ಬಿಡುಗಡೆ ಮಾಡಿದರು.
ಆಡಳಿತ ಕಚೇರಿಯನ್ನು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಇನ್‌ಲ್ಯಾಂಡ್ ಗ್ರೂಪ್‌ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ತಮ್ಮ ಸಂಸ್ಥೆಯು ಹಲವು ದೊಡ್ಡ ಪಟ್ಟಣಗಳಲ್ಲಿ ಸಮುಚ್ಚಯವನ್ನು ನಿರ್ಮಿಸಿದ್ದು, ಇದೀಗ ಪ್ರಥಮ ಬಾರಿಗೆ ಪುತ್ತೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಸೌಹಾರ್ದ ವಾತಾವರಣವಿರುವ ಈ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲು ಸಂತೋಷವಾಗುತ್ತಿದೆ. ಎರಡೂವರೆ ವರ್ಷಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ನೂತನ ಸಮುಚ್ಚಯದಲ್ಲಿನ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮಾರುಕಟ್ಟೆ ನಿರ್ವಾಹಕ ವಿಜಯಕುಮಾರ್, 6 ಮಹಡಿಗಳ ‘ಇನ್‌ಲ್ಯಾಂಡ್ ಮಯೂರ’ವು 72 ವಸತಿಗೃಹಗಳನ್ನು ಒಳ ಗೊಂಡಿರುತ್ತದೆ ಎಂದರು.
ನೂತನ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಈ ಹಿಂದೆ ಪುತ್ತೂರಿನ ಜನತೆಗೆ ಚಿರ ಪರಿಚಿತವಾಗಿದ್ದ ‘ಮಯೂರ’ ಎಂಬ ಚಲನ ಚಿತ್ರಮಂದಿರವಿತ್ತು. ಇಲ್ಲಿನ ಜನತೆ ಆ ಹೆಸರನ್ನು ಎಂದೆಂದಿಗೂ ನೆನಪಿಟ್ಟುಕೊಳ್ಳುವಂತೆ ಮಾಡುವ ಉದ್ದೇಶದಿಂದ ಈ ವಸತಿ ಹಾಗೂ ವಾಣಿಜ್ಯ ಸಮುಚ್ಚಯಕ್ಕೆ ‘ಇನ್‌ಲ್ಯಾಂಡ್ ಮಯೂರ’ ಎಂದು ಹೆಸರಿಡಲಾಗಿದೆ ಎಂದು ಸಿರಾಜ್ ಅಹ್ಮದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಕಟ್ಟಡದ ಗುತ್ತಿಗೆದಾರ ಮಹಾಬಲ ಎಂ., ಎಂಜಿನಿಯರ್ ಸುರೇಶ್ ಪೈ, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ, ನಗರಸಭಾ ವಿಪಕ್ಷ ನಾಯಕ ಎಚ್.ಮುಹಮ್ಮದಲಿ, ಸದಸ್ಯ ಜಗದೀಶ ನೆಲ್ಲಿಕಟ್ಟೆ, ಅಮ್ಮಣ್ಣ ರೈ, ಡಾ.ಸುರೇಶ್ ಪುತ್ತೂರಾಯ, ವಿಶ್ವನಾಥ ನಾಯಕ್, ವೇದನಾಥ ಸುವರ್ಣ, ರಂಗಕರ್ಮಿ ಚಿದಾನಂದ ಕಾಮತ್ ಕಾಸರಗೋಡು, ಡಾ.ಯು.ಪಿ.ಶಿವಾನಂದ, ಜೆಡಿಎಸ್ ತಾಲೂಕು ಸಮಿತಿ ಅಧ್ಯಕ್ಷ ಇಬ್ರಾಹೀಂ ಗೋಳಿಕಟ್ಟೆ, ಉದ್ಯಮಿಗಳಾದ ಬಲರಾಮ ಆಚಾರ್ಯ, ಅಜಯ್ ಆಳ್ವ, ತಾಲೂಕು ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕೇನ್ಯ ರವೀಂದ್ರನಾಥ ರೈ, ಪ್ರೊ.ಬಿ.ಜೆ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.













