ಕುಂದಾಪುರ: ಕೋಮು ಸೂಕ್ಷ್ಮ ಪ್ರದೇಶವೆಂದೇ ಬಿಂಬಿತವಾಗಿರುವ ಕುಂದಾಪುರದ ಕಂಡ್ಲೂರಿನಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣಗೊಳ್ಳುವ ಸ್ಥಿತಿ ಕಂಡುಬರುತ್ತಿದೆ. ಇಲ್ಲಿನ ಸ್ಥಳೀಯ ಸಂಘಟನೆಯೊಂದು ೫೦ ನೇ ವರ್ಷದ ಶಾರದೋತ್ಸವ ಪ್ರಯುಕ್ತ ಕಂಡ್ಲೂರು ಪೇಟೆಯಲ್ಲಿ ಅಳವಡಿಸಲಾದ ಕೇಸರಿ ಭಗವಧ್ವಜಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಭಗವಧ್ವಜ ಬಹುತೇಕ ಸುಟ್ಟು ಹೋಗಿದೆ. ಬೆಳಿಗ್ಗೆ ಘಟನೆ ತಿಳಿಯುತ್ತಲೇ ಹಿಂದೂಪರ ಸಂಘಟನೆಯವರು ಹಾಗೂ ಕಾರ್ಯಕ್ರಮ ಆಯೋಜಕರು ಸ್ಥಳಕ್ಕೆ ಭೇಟಿ ಆಕ್ರೋಷ ವ್ಯಕ್ತಪಡಿಸಿದರು. ಎರಡು ದಿನಗಳ ಹಿಂದಷ್ಟೇ ಸ್ಥಳದಲ್ಲಿ ಶಾರದೋತ್ಸವ ಪ್ರಯುಕ್ತ ಶಾಂತಿ ಸಭೆ ನಡೆದಿದ್ದರೂ ಕೂಡ ಕಂಡ್ಲೂರು ಸಹಜ ಸ್ಥಿತಿಗೆ ಮರಳುತ್ತಿರುವುದನ್ನು ಸಹಿಸದ ದುಷ್ಕರ್ಮಿಗಳು ಶಾರದೋತ್ಸವಕ್ಕಾಗಿ ಹಾಕಲಾಗಿರುವ ಈ ಧ್ವಜಕ್ಕೆ ಬೆಂಕಿ ಹಾಕಿ ಸಂಘರ್ಷ ನಡೆಸುವ ಹುನ್ನಾರ ನಡೆಸಿದ್ದಾರೆ.
ಅಕ್ಟೋಬರ್ 14ರ ರಾತ್ರಿ ಇದೇ ಭಾಗದಲ್ಲಿ ದಲಿತ ಯುವಕರಿಬ್ಬರಿಗೆ ಭಿನ್ನ ಕೋಮಿನ ಯುವಕರು ಮಾರಣಾಂತಿಕ ಹಲೆ ನಡೆಸಿದ್ದು ಇದರಿಂದ ಕಂಡ್ಲೂರಿನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಅಲ್ಲದೇ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಖುದ್ದು ಕಂಡ್ಲೂರಿಗೆ ಭೇಟಿ ನೀಡಿ ಎರಡು ಕೋಮಿನವರ ಬಳಿ ಮಾತನಾಡಿ ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಆದರೇ ಪರಿಸ್ಥಿತಿ ಮಾತ್ರ ತಿಳಿಗೊಳ್ಳದಿರುವುದು ಮಾತ್ರ ಸ್ಥಳಿಯರನ್ನು ಆತಂಕಕ್ಕೀಡು ಮಾಡಿದೆ.
ಶಾರದೋತ್ಸವ ಕಾರ್ಯಕ್ರಮದ ಸಲುವಾಗಿ ಐವತ್ತಕ್ಕೂ ಅಧಿಕ ಬ್ಯಾನರುಗಳು ಹಾಗೂ ಕೇಸರಿ ಧ್ವಜಗಳನ್ನು ಸ್ಥಳೀಯ ಪೇಟೆಯಲ್ಲಿ ಅಳವಡಿಸಿದ್ದು ಇದು ಉದ್ದೇಶಪೂರ್ವಕ ಕ್ರತ್ಯ ಎಂದು ಕಾರ್ಯಕ್ರಮ ಸಂಘಟಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಪುರ ಡಿವೈಎಸ್ಪಿ ಹಾಗೂ ವ್ರತ್ತನಿರೀಕ್ಷಕರು ಭೇಟಿ ನೀಡಿದ್ದಾರೆ.

