ಕನ್ನಡ ವಾರ್ತೆಗಳು

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ : ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಭಕ್ತ ಸಮೂಹ

Pinterest LinkedIn Tumblr

Kaveramme_talcauveri_1

ಕೃಪೆ: ಚರಣ್ ಕೇಕಡ

ಮಡಿಕೇರಿ :ಕನ್ನಡ ನಾಡಿನ ಜೀವನದಿ ಕಾವೇರಿಯ ತವರು ತಲಕಾವೇರಿಯಲ್ಲಿ ತಾಯಿ ಕಾವೇರಿ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಮಧ್ಯರಾತ್ರಿ 12ಗಂಟೆ 15 ನಿಮಿಷಕ್ಕೆ ಕಾವೇರಿ ಕುಂಡಿಕೆಯಲ್ಲಿ ತೀರ್ಥೋದ್ಭವವಾಯಿತು.ಪವಿತ್ರ ಮುಹೂರ್ತ ಮಿಥುನ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗುತ್ತಿದ್ದಂತೆ ಬ್ರಹ್ಮಕುಂಡಿಕೆ ಬಳಿಯ ಪುಷ್ಕರಣಿಗೆ ಧುಮುಕಿದ ಸಾವಿರಾರು ಭಕ್ತರು ಕಾವೇರಿ ತೀರ್ಥ ಪಡೆಯಲು ಮುಗಿ ಬಿದ್ದರು.

ಮುಂಜಾನೆಯಿಂದ ನಿರಂತರವಾಗಿ ತಲಕಾವೇರಿಯಲ್ಲಿ ಹೋಮ ಹವನಾದಿ ವಿಶೇಷ ಪೂಜೆಗಳು ನಡೆದವು. ತೀರ್ಥೋದ್ಭವಕ್ಕೂ ಅರ್ಧ ಗಂಟೆಗೆ ಮೊದಲು ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ತಕ್ಕ ಮುಖ್ಯಸ್ಥರು ಭಂಡಾರವನ್ನು ಸಾಂಪ್ರದಾಯಿಕವಾಗಿ ತಲಕಾವೇರಿಗೆ ತಂದರು. ಅರ್ಚಕರ ತಂಡ ತೀರ್ಥ ಕುಂಡಿಕೆಗೆ ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ಮಾಡುತ್ತಿದ್ದಂತೆ ತೀರ್ಥೋದ್ಭವವಾಯಿತು.

Kaveramme_talcauveri_2 Kaveramme_talcauveri_3 talcauveri_photo_5 talcauveri_photo_6 talcauveri_photo_7talcauveri_photo_4

ಮೈಸೂರು, ಮಂಡ್ಯ, ಬೆಂಗಳೂರು, ತಮಿಳು ನಾಡು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಭಕ್ತರು ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಜಮಾಯಿಸಿ ಕಾವೇರಿ ತುಲಾ ಸಂಕ್ರಮಣದ ಕ್ಷಣವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಭಾಗಮಂಡಲದಲ್ಲಿ ಕೇಶ ಮುಂಡನ ಹರಕೆಯನ್ನು ತೀರಿಸಿದ ಭಕ್ತರು ಪಿಂಡ ಪ್ರದಾನ ಆಚಾರ ವಿಚಾರಗಳಲ್ಲೂ ಪಾಲ್ಗೊಂಡರು.

ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಲಕಾವೇರಿಯೆಡೆಗೆ ಪಯಣ ಬೆಳೆಸಿದರು.
ಭಕ್ತಾಧಿಗಳಿಗೆ ಯಾವುದೇ ಅನಾನುಕೂಲವಾಗದಂತೆ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿತ್ತು.

ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದ್ದ ಪೊಲೀಸ್ ಇಲಾಖೆ ವಾಹನಗಳ ನಿಲುಗಡೆಗೂ ಕ್ರಮ ಕೈಗೊಂಡಿತ್ತು. ನೂರಾರು ವಾಹನಗಳು ಸಾಲು ಗಟ್ಟಿ ನಿಂತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Write A Comment