ಮಂಗಳೂರು, ಅ. 18: ಎತ್ತಿನಹೊಳೆ ಯೋಜನೆ ವೈಜ್ಞಾನಿಕ ವರದಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹಾನಿಯಾಗಲಿದೆ ಎಂಬುದು ಸಾಬೀತಾದರೆ ಖಂಡಿತವಾಗಿಯೂ ಯೋಜನೆಯನ್ನು ನಾನೂ ವಿರೋಧಿಸುತ್ತೇನೆ. ಎತ್ತಿನಹೊಳೆ ಯೋಜನೆ ಬಗ್ಗೆ ವಿಧಾನ ಸಭೆ ಮತ್ತು ಪರಿಷತ್‌ನಲ್ಲಿ ಪ್ರತಿ ಪಕ್ಷಗಳು ನಿಯಮಾವಳಿ ಮಂಡಿಸಿ ಚರ್ಚೆ ನಡೆಸಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮನಪಾದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಒಂದು ಬಾರಿ ಅಸೆಂಬ್ಲಿಯಲ್ಲಿ ಅನುಮೋದನೆಗೊಂಡ ಯೋಜನೆಯನ್ನು ನಿಲ್ಲಿಸಬೇಕಾದರೆ ಯೋಜನೆಯ ಬಗ್ಗೆ ಮತ್ತೆ ಚರ್ಚೆ ನಡೆಯಬೇಕು. ಸಾಧಕ ಬಾಧಕ ಪರಿಗಣಿಸಿದಾಗ ಮಾತ್ರ ನಿಲ್ಲಿಸಬಹುದೇ ಹೊರತು ಯೋಜನೆಯನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಅನನುಕೂಲವಾಗುವ ಕಾರಣ ಸಭೆಯನ್ನು ಮುಂದೂಡಬೇಕೆಂಬುದಾಗಿ ಹಲವು ಮಂದಿ ಮನವಿ ಸಲ್ಲಿಸಿರುವುದರಿಂದ ಅ.19ರಂದು ಮುಖ್ಯಮಂತ್ರಿ ಕರೆದಿದ್ದ ಎತ್ತಿನಹೊಳೆ ಕುರಿತ ಸಭೆಯನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಶಾಂತ್ ಕೊಲೆ ಪ್ರಕರಣ : ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ
ಮೂಡುಬಿದಿರೆಯಲ್ಲಿ ನಡೆದ ಪ್ರಶಾಂತ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರಗಿಸಲು ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್ ಪ್ರತ್ಯೇಕ ಸಭೆ ನಡೆಸಿ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.
ಯಾವುದೇ ಜಾತಿ, ಮತ, ಧರ್ಮದಲ್ಲಿರುವ ಸಮಾಜ ದ್ರೋಹಿ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದ್ದು, ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಜಾರಿಗೆ ತರಲಾದ ಹೆಲ್ತಿಸನ್ ಆ್ಯಪನ್ನು ಮಂಗಳೂರಿಗೂ ವಿಸ್ತರಣೆ ಮಾಡುವ ಉದ್ದೇಶವಿದ್ದು, ಇಲ್ಲಿನ ಆಸ್ಪತ್ರೆಯ ಸ್ಥಿತಿಗತಿಗಳನ್ನು ಸಾರ್ವಜನಿಕರು ನೇರವಾಗಿ ಆ್ಯಪ್ ಮೂಲಕ ಚಿತ್ರ ಸಹಿತ ದೂರು ಸಲ್ಲಿಸಬಹುದಾಗಿದೆ ಎಂದು ಸಚಿವ ಖಾದರ್ ಹೇಳಿದರು
