ಉಡುಪಿ: ರೈತರ ಆತ್ಮಹತ್ಯೆ ತಪ್ಪಿಸಲು, ರೈತರಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಸರಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ನಡೆಸುತ್ತಿರುವ ರೈತ ಚೈತನ್ಯ ಯಾತ್ರೆಗೆ ಉತ್ತಮ ಬೆಂಬಲ ದೊರೆತಿದ್ದು ಕೆಲವೇ ದಿನಗಳಲ್ಲಿ ಮೂರನೇ ಹಂತದ ಚೈತನ್ಯ ಯಾತ್ರೆ ನಡೆಸಲು ನಿರ್ಧರಿಸ ಲಾಗಿದೆಯೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಬುಧವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 580 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಹುಲ್ಗಾಂಧಿ ಕರ್ನಾಟಕ ಭೇಟಿ ಅನಂತರವೂ 25 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರಕಾರ ಸ್ಪಂದಿಸುತ್ತಿಲ್ಲಆತ್ಮಹತ್ಯೆ ತಡೆಯಲು, ರೈತ ಸಮುದಾಯದಲ್ಲಿ ವಿಶ್ವಾಸ ತುಂಬಲು ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಜನತೆಗೆ ತಿಳಿಸಲಿ ಎಂದು ಸವಾಲೆಸೆದರು.
ದ.ಕ., ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಯಲ್ಲಿ ಏನು ಕೆಲಸ ಆಗಿದೆ ಎಂಬ ವಾಸ್ತವ ಮಾಹಿತಿಯನ್ನು ಜನರ ಮುಂದಿಡಬೇಕು ಎಂದರು. ಕೇಂದ್ರ ಸರಕಾರದಿಂದ ಈ ಬಾರಿ ೧೪ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ ಹೆಚ್ಚು ವರಿಯಾಗಿ ತೆರಿಗೆ ಹಂಚಿಕೆಯಲ್ಲಿ 25000 ಕೋ.ರೂ. ಬಂದಿದೆ. ರಾಷ್ಟ್ರೀಯ ವಿಪತ್ತು ನಿಧಿಯಡಿ ರಾಜ್ಯ ಸರಕಾರ ಬರಗಾಲ ಪರಿಹಾರಕ್ಕಾಗಿ ಎಷ್ಟು ಖರ್ಚು ಮಾಡಿದರೂ ಅದನ್ನು ಬಿಡುಗಡೆ ಮಾಡಿಸಲಿದ್ದೇವೆ. ರಾಜ್ಯ ಸರಕಾರ ಬರಗಾಲ ಸಂಕಷ್ಟಕ್ಕೆ ತನ್ನ ಬೊಕ್ಕಸದಿಂದ ಎಷ್ಟು ಖರ್ಚು ಮಾಡಿದೆ ಎಂಬುದನ್ನು ತಿಳಿಸಬೇಕು ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದ ಆಡಳಿತ ದುಃಸ್ಥಿತಿ ಕಂಡು ರಾಜ್ಯದಲ್ಲೇ ಕೆಲಸ ಮಾಡಿ ಕಾಂಗ್ರೆಸ್ ತೊಲಗಿಸಲು ನಿರ್ಧರಿಸಿದ್ದೇನೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯದ್ಯಂತ ಪ್ರವಾಸ ಮಾಡಿ ನಿರಂತರ ಕೆಲಸ ಮಾಡಲಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಯಾರೊಂದಿಗೂ ಸ್ಪರ್ಧೆ ಮಾಡುತ್ತಿಲ್ಲ. ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು.
ಸಿ.ಎಂ. ಕ್ಷಮೆಯಾಚಿಸಲಿ: ಮೋದಿ ಅವರ ಸಾಧನೆಗಳಿಂದ ಭಾರತವನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. ದೇಶದಲ್ಲಿ ಅಭಿವೃದ್ಧಿ ಕೆಲಸಗಳು ಅನೇಕ ನಡೆಯುತ್ತಿವೆ. ಇದನ್ನು ಸಹಿಸಲಾಗದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೋದಿ ಅವರನ್ನು ಟೀಕಿಸು ತ್ತಿದ್ದಾರೆ. ಗಾಂಧಿಜಿ ಹುಟ್ಟಿದ ನಾಡಿನಲ್ಲಿ ನರೇಂದ್ರ ಮೋದಿ ಹುಟ್ಟಿದ್ದು ವಿಪರ್ಯಾಸವೆಂದು ಸಿದ್ಧರಾಮಯ್ಯ ಹೇಳಿರುವುದು ಸರಿಯಲ.. ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಯಡಿಯೂರಪ್ಪ ಹೇಳಿದರು.
ಈ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಟ್ಟಾರು ರತ್ನಾಕರ ಹೆಗ್ಡೆ, ಶ್ಯಾಮಲಾ ಕುಂದರ್, ಉದಯ ಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
