ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಮಂಗಳೂರು ದಸರಾ ಪ್ರಯುಕ್ತ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ದಸರಾ ಮಹೋತ್ಸವದ ಪ್ರಮುಖ ಕೇಂದ್ರವಾದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಬಣ್ಣ ಬಣ್ಣಗಳ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿದೆ.
ವಿದ್ಯುತ್ ದೀಪಗಳಿಂದ ಜಗಮಗಿಸುವ ಕ್ಷೇತ್ರದ ಒಳಾಂಗಣದ ಪುಷ್ಕರಣಿಯ ಸುತ್ತಮುತ್ತ ಚಿಮ್ಮುವ ಬಣ್ಣದ ಕಾರಂಜಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬದಂತೆ. ಲಕ್ಷಾಂತರ ವಿದ್ಯುತ್ ದೀಪಗಳನ್ನು ಮಂಗಳೂರಿನ ರಸ್ತೆಗಳ ಇಕ್ಕೆಲಗಳಲ್ಲಿ ಅಳವಡಿಸಿಲಾಗಿದ್ದು, ರಾತ್ರಿ ಪೂರ್ತಿ ನಗರ ಕಂಗೊಳಿಸುತ್ತಿದೆ.
ಒಂದೆಡೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣಗೊಂಡು ಇಪತೈದು ವರ್ಷ, ಇನ್ನೊಂದೆಡೆ ಮಂಗಳೂರು ದಸರಾ ಉತ್ಸವದ ರಜತಮಹೋತ್ಸವ ಸಂಭ್ರಮ. ಈ ಅವಳಿ ಸಂಭ್ರಮದಲ್ಲಿ ಈ ಬಾರಿ ಮಂಗಳೂರು ದಸರಾ ವಿಜೃಂಭಿಸಲಿದೆ. ಮೆರವಣಿಗೆಯೂ ವೈಭವೋಪೇತವಾಗಲಿದೆ. ದೇವಸ್ಥಾನಕ್ಕೂ ಬಣ್ಣದ ಲೇಪನ ನೀಡಲಾಗುತ್ತಿದೆ. ದೇವಸ್ಥಾನದ ಸಮೀಪ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನ ಮತ್ತು ಮಂಗಳೂರು ದಸರಾಕ್ಕೆ ರಜತ ಮಹೋತ್ಸವವಾದ್ದರಿಂದ ೨೫ ಲಕ್ಷ ದೀಪಗಳನ್ನು ಬಳಕೆ ಮಾಡಲಾಗುತ್ತಿದೆ. ಸಂಪೂರ್ಣ ಲೈಟಿಂಗನ್ನು ಸುವ್ಯವಸ್ಥಿತವಾಗಿ ಮಾಡಲು ಸುಮಾರು ೮ ಲೈಟಿಂಗ್ ತಂಡಗಳಿಗೆ ಸಬ್ ಕಂಟ್ರಾಕ್ಟ್ ನೀಡಲಾಗಿದೆ. 60 ಜನ 3 ವಾರದಿಂದ ಲೈಟಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ. ಲೈಟಿಂಗ್ ವರ್ಷದಿಂದ ವರ್ಷಕ್ಕೆ ವಿನ್ಯಾಸದಲ್ಲಿ ಬದಲಾವಣೆ ಮಾಡುವ ಮೂಲಕ ವಿಶೇಷ ಆಕರ್ಷಣೆ ನೀಡಲಾಗುತ್ತಿದೆ. 1000 ಟ್ಯ್ಯೂಬ್, 260 ಮೆಟ್‌ಲೈಟ್‌ನಿಂದ ದೇವಸ್ಥಾನದ ವಠಾರದಲ್ಲೇ ಅಲಂಕಾರ ಮಾಡಲಾಗುತ್ತದೆ. ಒಟ್ಟು ವಿದ್ಯುದ್ದೀಪಗಳ ಅಲಂಕಾರಕ್ಕೆ 40 ಕೆ.ವಿ.ಯ 20 ಮತ್ತು 200 ಕೆ.ವಿ.ಯ 4 ಜನರೇಟರ್ ಬಳಕೆ ಮಾಡಲಾಗುತ್ತಿದೆ.
ಮಂಗಳೂರು ದಸರಾ ಈಗಾಗಲೇ ಅತ್ಯಂತ ಪ್ರಸಿದ್ಧವಾಗಿದೆ. ಈ ದಸರಾವನ್ನು ವಿಶ್ವಮಟ್ಟಕ್ಕೇರಿಸಿದ ಕೀರ್ತಿ ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರದು. ಒಂದೇ ಮತ, ಒಂದೇ ಕುಲ, ಒಂದೇ ದೇವರು ಎಂದು ಸರ್ವ ಸಮಾನತೆಯ ಮಂತ್ರವನ್ನು ಬೋಧಿಸಿದ ನಾರಾಯಣ ಗುರುಗಳ ಸಂದೇಶವನ್ನು ಸಾರುತ್ತಾ, ಸರ್ವಸಮಾನತೆಯ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ಇದೀಗ ಮಂಗಳೂರು ದಸರಾ ಅದ್ದೂರಿಯಾಗಿ ನಡೆಯುತ್ತಿದೆ.
ಕಳೆದ ಇಪ್ಪತ್ತಮೂರು ವರ್ಷಗಳಿಂದ ನಡೆಯುತ್ತಿರುವ ಮಂಗಳೂರು ದಸರಾವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕುದ್ರೋಳಿ ಕ್ಷೇತ್ರದ ಪಕ್ಕದಲ್ಲೇ ಇರುವ ಸಭಾಂಗಣದಲ್ಲಿ ಶಾರದಾ ಮಾತೆ, ಗಣಪತಿ ಸೇರಿದಂತೆ ನವದುರ್ಗೆಯರ ಪ್ರತಿಷ್ಠಾಪನೆ ಇಲ್ಲಿ ನಡೆದು ಅಪರೂಪದ ವರ್ಣಾಲಂಕಾರವನ್ನು ಮಾಡಲಾಗುತ್ತಿದೆ. ಈ ದೃಶ್ಯವನ್ನು ನೋಡಲೆಂದು ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.
ಸ್ವರ್ಣಾಲಂಕಾರಗೊಂಡ ಮಂಟಪದಲ್ಲಿ ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದ ಮಾತಾ, ಆದಿಶಕ್ತಿ ಮತ್ತು ಶೈಲಪುತ್ರಿಯರ ಅಲಂಕೃತ ವಿಗ್ರಹಗಳನ್ನು ವಿಶಿಷ್ಟ ರೀತಿಯಲ್ಲಿ ಇಟ್ಟು ಎಲ್ಲಾ ದೇವರಿಗೂ ಪ್ರತಿನಿತ್ಯ ಪೂಜೆ ಮಾಡಲಾಗುತ್ತದೆ. ಹತ್ತು ದಿನ, ಒಂದೇ ಕಡೆ ನವದುರ್ಗೆ ಹಾಗೂ ಶಾರದಾ ಮಾತೆಯನ್ನು ಏಕಕಾಲದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿಗಳೊಂದಿಗೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಇಂತಹ ಮಂಗಳೂರು ದಸರಾವನ್ನು ಕಣ್ತುಂಬಿಕೊಳ್ಳಲು ಜನಜಂಗುಳಿಯೇ ಇತ್ತ ಧಾವಿಸುತ್ತಿದೆ.
ಇಂದು (13ರಂದು) ಬೆಳಿಗ್ಗೆ 11 ಗಂಟೆಗೆ ನವದುರ್ಗೆಯರ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಟಾಪನೆ ನಡೆಯಲಿದ್ದು ಅ. 23ರಂದು ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ.










