ಮಂಗಳೂರು: ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಜಿಲ್ಲೆಯ ಜನತೆಯ ಸಹಕಾರದೊಂದಿಗೆ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮಂಗಳೂರಲ್ಲಿ ಅ.15 ರಂದು ರಾಸ್ತಾ ರೋಕೋ ಮತ್ತು ಜೈಲ್ ಭರೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈಗಾಗಲೇ ಈ ಯೋಜನೆ ವಿರುದ್ಧ ಹಲವಾರು ಹೋರಾಟಗಳನ್ನು ನಡೆಸಲಾಗಿದ್ದು, ಇದೀಗ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಹೋರಾಟದ ಮುಂದುವರಿದ ಭಾಗವಾಗಿ ಅಕ್ಟೋಬರ್ 15ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಪಂಪ್‍ವೆಲ್‍ನಲ್ಲಿ ರಸ್ತೆ ತಡೆ ಚಳವಳಿಯನ್ನು ಹಮ್ಮಿಕೊಂಡಿದೆ ಎಂದು ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಡಾ.ನಿರಂಜನ್ ರೈ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಜನರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರಕಾರ ಯೋಜನೆಯ ಪರವಹಿಸುತ್ತಿರುವುದರಿಂದ ನಮ್ಮ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಯೋಜನೆ ರೂಪಿಸಿಲಾಗಿದೆ. ಈ ಚಳವಳಿಯಲ್ಲಿ ಜಿಲ್ಲೆಯ ಹೋರಾಟ ಪರ ಹಾಗೂ ಇನ್ನಿತರ ಸಂಘಟನೆಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.
ಎತ್ತಿನಹೊಳೆ ಯೋಜನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ವಸಂತ ಬಂಗೇರ, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಸಹಿತ ಇನ್ನೂ ಅನೇಕರು ವಿರೋಧಿಸುತ್ತಿದ್ದು ಇದು ಉತ್ತಮ ಬೆಳವಣಿಗೆಯಾಗಿದ್ದು ಹಲವಾರು ಸಂಘಟನೆಗಳು ಕೂಡಾ ಈ ಯೋಜನೆ ವಿರುದ್ಧ ಸೆಟೆದು ನಿಲ್ಲುತ್ತವೆ ಎಂದು ಡಾ.ನಿರಂಜನ್ ರೈ ಹೇಳಿದರು.
ಕೋಲಾರದ ಜನತೆಗೆ ನೀರು ಒದಗಿಸಲು ನಮ್ಮ ವಿರೋಧವಿಲ್ಲ. ಆದರೆ ಪಶ್ಚಿಮ ಘಟ್ಟವನ್ನು ಹಾಳುಗೆಡವಿ ನೀರನ್ನು ಪಂಪ್ ಮಾಡಿ ಸಾಗಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ ಅವರು, ಜಿಲ್ಲೆಯ ಜನರ ಜನಜೀವನವನ್ನೇ ದುಸ್ತರಗೊಳಿಸಲಿರುವ ಈ ಯೋಜನೆ ವಿರುದ್ಧ ನಾವು ಹಮ್ಮಿಕೊಂಡಿರುವ ರಾಸ್ತಾ ರೋಕೋ ಮತ್ತು ಜೈಲ್ ಭರೋ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸುವಂತೆ ನಿರಂಜನ್ ರೈ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ವ ಕಾಲೇಜ್ ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ದಿನಕರ್ ಶೆಟ್ಟಿ, ಪರಿಸರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಶಶಿಧರ್ ಶೆಟ್ಟಿ, ಎಂ.ಜಿ. ಹೆಗ್ಡೆ, ಕಟೀಲ್ ದಿನೇಶ್ ಪೈ, ಆನಂದ ಅಡ್ಯಾರ್, ಶಶಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

