ಮಂಗಳೂರು,ಅ.12: ನಗರದ ಅತಿ ಪುರಾತನ ಹಿಂದೂ ರುದ್ರಭೂಮಿ ನಂದಿಗುಡ್ಡೆ ಸ್ಮಶಾನದಲ್ಲಿ ಮುಸ್ಲಿಂ ಧಪನಕ್ಕಾಗಿ ಜಾಗ ನೀಡಲು ಉದ್ದೇಶಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳ ವತಿಯಿಂದ ರವಿವಾರ ಸಂಜೆ ಶ್ಮಶಾನದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಉಭಯ ಸಂಘಟನೆಗಳ ಸಾವಿರಾರು ಮಂದಿ ಕಾರ್ಯಕರ್ತರು ಅತ್ತಾವರ ಕಟ್ಟೆಯಿಂದ ನಂದಿಗುಡ್ಡೆ ಶ್ಮಶಾನದ ತನಕ ಮೆರವಣಿಗೆಯಲ್ಲಿ ಸಾಗಿ ಬಳಿಕ ನಂದಿಗುಡ್ಡೆಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನ ಸಭೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಅವರು ಮಾತನಾಡಿ, ನಗರದ ಅತಿ ಪುರಾತನ ಹಿಂದೂ ರುದ್ರಭೂಮಿ ನಂದಿಗುಡ್ಡೆಯ ಜಾಗದಲ್ಲಿ ಮುಸ್ಲಿಂ ಧಪನ ಜಾಗ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಂದಿಗುಡ್ಡ ಶ್ಮಶಾನ ಹಿಂದೂಗಳಿಗೆ ಮಾತ್ರ ಮೀಸಲು. ಇದರಲ್ಲಿ ಇತರ ಧರ್ಮಗಳಿಗೆ ಅವಕಾಶವಿಲ್ಲ. ವಿರೋಧ ಲೆಕ್ಕಿಸದೆ ಮುನ್ನಡೆದರೆ ಮುಂದೆ ಸಂಘಟನೆ ಉಗ್ರ ರೀತಿಯಲ್ಲಿ ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.
ನಂದಿಗುಡ್ಡೆ ಹಿಂದೂ ರುದ್ರಭೂಮಿ ನಗರದ ಪ್ರಮುಖ ರುದ್ರಭೂಮಿಯಾಗಿದ್ದು ನಗರದ ಲಕ್ಷಾಂತರ ಜನರಿಗೆ ಬೇಕಾಗಿದೆ. ಇಂದು ಈ ರುದ್ರಭೂಮಿಯಲ್ಲಿ 28 ಸೆಂಟ್ಸ್ ಜಾಗದಲ್ಲಿ ಮುಸ್ಲಿಂ ಧಪನ ನಿರ್ಮಾಣಕ್ಕೆ ನಿರ್ಧರಿಸಿರುವುದು ಸರಿಯಲ್ಲ. ಒಂದು ವೇಳೆ ನಂದಿಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಮುಸ್ಲಿಂ ಧಪನ ಜಾಗ ನಿರ್ಮಾಣವಾದರೆ ಅಲ್ಲಿ ಮುಂದೆ ಮಸೀದಿ ತಲೆ ಎತ್ತಬಹುದು. ಇದರಿಂದ ಈ ಪರಿಸರದ ಕೋಮ ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ನಂದಿಗುಡ್ಡೆ ಸ್ಮಶಾನದಲ್ಲಿ ಮುಸ್ಲಿಂ ಧಪನಕ್ಕೆ ಅವಕಾಶ ನೀಡಬಾರದೆಂದು ಹೇಳಿದರು.
ವಿಎಚ್ ಪಿಯ ಇನ್ನೋರ್ವ ಮುಖಂಡ ಜಿತೇಂದ್ರ ಕೊಟ್ಟಾರಿ ಅವರು ಮಾತನಾಡಿ, ದ.ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಿಂದೂ ಬಾಂಧವರ ಶ್ಮಶಾನಕ್ಕೂ ಅಡ್ಡಗಾಲಿಟ್ಟು ಹಿಂದೂಗಳ ಸಹನೆಯನ್ನು ಪರೀಕ್ಷಿಸುವುದು ಸರಿಯಲ್ಲ. ಹಿಂದೂ ಸಮಾಜ ಇದನ್ನು ಸಹಿಸುವುದಿಲ್ಲ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ವಿಷಯ ಪ್ರಸ್ತಾವಿಸಿ ನಂದಿಗುಡ್ಡೆ ಶ್ಮಶಾನದ 2.58 ಎಕರೆ ಜಾಗವನ್ನು ಜಪ್ಪು ಮಸೀದಿಯವರು ಕೇಳಿದ್ದು, ಶಾಸಕ ಮೊದಿನ್ ಬಾವಾ ಶಿಫಾರಸು ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದ್ದರು. ಇದಕ್ಕೆ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತ ಪಡಿಸಿದ್ದರಿಂದ ಈಗ ಸರ್ವೇ ನಂ 251/1 ರಲ್ಲಿ ಮುಖ್ಯವಾಗಿ ದಲಿತೋದ್ಧಾರಕ ಕುದ್ಮಲ್ ರಂಗರಾವ್ ಅವರ ಸಮಾಧಿ ಇರುವ ಜಾಗವನ್ನು ಮುಸ್ಲಿಂ ಸಾರ್ವಜನಿಕ ಶ್ಮಶಾನವಾಗಿ ಕಾದಿರಿಸಲು ಆಡಳಿತಾತ್ಮಕ ಪ್ರಕ್ರಿಯೆ ನಡೆಯುತ್ತಿದೆ. ಈ ದಿಶೆಯಲ್ಲಿ ಮುಂದುವರಿದಿದ್ದೇ ಆದಲ್ಲಿ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಎಂದರು.
ಶ್ಮಶಾನ ಸಮಿತಿ ಅಧ್ಯಕ್ಷ ವಸಂತ ಅವರು ನಂದಿಗುಡ್ಡೆ ಶಾಂತ ಪರಿಸರವಾಗಿದೆ. ಶ್ಮಶಾನದ ಜಾಗವನ್ನು ಮುಸ್ಲಿಮರಿಗೆ ನೀಡಿದಲ್ಲಿ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ದೂರಗಾಮಿ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಇಲ್ಲಿ ಮುಸ್ಲಿಮರಿಗೆ ದಫನ ಮಾಡಲು ಅವಕಾಶ ನೀಡದಿರುವುದೇ ಒಳ್ಳೆಯದು ಎಂದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರು, ಹಿಂದೂ ಮುಖಂಡರಾದ ಸತ್ಯಜೀತ್ ಸುರತ್ಕಲ್, ಶಿವಾನಂದ ಮೆಂಡನ್. ಕೃಷ್ಣಮೂರ್ತಿ, ಶರಣ್ ಪಂಪ್ವೆಲ್, ಕಟೀಲು ದಿನೇಶ್ ಪೈ ಮತ್ತಿತರರು ಉಪಸ್ಥಿತರಿದ್ದರು.
















