ಕನ್ನಡ ವಾರ್ತೆಗಳು

ಮೊದಲು ಇಲ್ಲಿನ ಕಾನೂನು ಸುವ್ಯವಸ್ಥೆ ಸಮರ್ಪಕವಾಗಲಿ : ಸ್ಮಾರ್ಟ್ ಸಿಟಿ ಸಂವಾದದಲ್ಲಿ ಸಾರ್ವಜನಿಕರ ಸಲಹೆ

Pinterest LinkedIn Tumblr

Smart_city_lobo_1

ಮಂಗಳೂರು, ಅ.12 : ‘‘ಮಂಗಳೂರನ್ನು ಸ್ಮಾರ್ಟ್ ಸಿಟಿ ನಗರವಾಗಿಸುವುದಕ್ಕಿಂತ ಮೊದಲು ಇಲ್ಲಿನ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿ…’’ ಮಂಗಳೂರು ಸಿಟಿಗೆ ಸ್ಮಾರ್ಟ್ ಆಯ್ಕೆಯಾಗುವ ಕುರಿತು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಗರದ ಗೋರಕ್ಷನಾಥ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯಗಳು ವ್ಯಕ್ತವಾಗಿತ್ತು.

‘‘ಅನೈತಿಕ ಗೂಂಡಾಗಿರಿಯಿಂದಾಗಿ ಮಂಗಳೂರಿಗೆ ಬರಲು ಪ್ರವಾಸಿಗರು ಹಿಂಜರಿಯುವಂತಾಗಿದೆ. ಮೊದಲು ಇಲ್ಲಿನ ಕಾನೂನು ಸುವ್ಯವಸ್ಥೆ ಸಮರ್ಪಕವಾಗಲಿ’’ ಎಂದು ಸಾಮಾಜಿಕ ಕಾರ್ಯಕರ್ತ ಮನೋಹರ ಶೆಟ್ಟಿ ಅಭಿಪ್ರಾಯಿಸಿದರು.ಇದಕ್ಕೆ ಪೂರಕವಾಗಿ ಮಾತನಾಡಿದ ಉದ್ಯಮಿ ಜಾರ್ಜ್ ಪಾಯಸ್, ಕಾನೂನು ವ್ಯವಸ್ಥೆ ಸರಿಯಾಗದಿದ್ದರೆ ಉದ್ಯಮಿಗಳು ಇಲ್ಲಿ ಹಣ ಹೂಡಲು ಹಿಂದೆಮುಂದೆ ನೋಡುತ್ತಾರೆ ಎಂದರಲ್ಲದೆ, ನಗರದ ವ್ಯಾಪ್ತಿಯನ್ನು ಗಂಜಿಮಠದವರೆಗೆ ವಿಸ್ತರಿಸುವಂತೆ ಸಲಹೆ ನೀಡಿದರು.

‘‘ಪ್ರಸ್ತುತ ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಮೊದಲು ಜನಾಭಿಪ್ರಾಯ ಸಂಗ್ರಹಿಸಬೇಕು. ಅದನ್ನು ಪರಿಹರಿಸಿ ಸ್ಮಾರ್ಟ್ ಸಿಟಿಯ ಬಗ್ಗೆ ಚಿಂತನೆ ನಡೆಸುವುದು ಸೂಕ್ತ. ಅದೇ ರೀತಿ ಸ್ಮಾರ್ಟ್ ಸಿಟಿ ವ್ಯಾಪ್ತಿಗೊಳಪಡುವ ನಗರದ ಹಳ್ಳಿಗಳ ಬಗ್ಗೆಯೂ ಗಮನಹರಿಸುವುದು ಉತ್ತಮ’’ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ರಾಜಾರಾಮ ಶೆಟ್ಟಿ ಅಭಿಪ್ರಾಯಿಸಿದರು.

Smart_city_lobo_2 Smart_city_lobo_3 Smart_city_lobo_4 Smart_city_lobo_5

‘‘ನಗರದಲ್ಲಿ ನೀರು, ಒಳಚರಂಡಿ, ವಿದ್ಯುತ್ ಉತ್ಪಾದನೆಯ ಬಗ್ಗೆ ಭವಿಷ್ಯದ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿಪಡಿಸುವ ಕಾರ್ಯ ಆಗಲಿ’’ ಎಂದು ಬ್ಯಾಂಕ್ ಉದ್ಯೋಗಿ ವಿಶ್ವನಾಥ ಕೋಟೆಕಾರ್ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಸ್ಮಾರ್ಟ್ ಸಿಟಿಗೆ ಮಂಗಳೂರು ಮಹಾನಗರ ಪಾಲಿಕೆ ಆಯ್ಕೆಯಾದಲ್ಲಿ ಐದು ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ತಲಾ 500 ಕೋ.ರೂ.ನಂತೆ ಒಟ್ಟು ಒಂದು ಸಾವಿರ ಕೋ.ರೂ. ಅನುದಾನ ದೊರೆಯಲಿದೆ. ಈ ಮೊತ್ತವನ್ನು ನಗರದಲ್ಲಿ ಸುಮಾರು 2 ಲಕ್ಷ ಕೋ.ರೂ. ಬಂಡವಾಳ ಹೂಡಿಕೆಗೆ ವೇಗವರ್ಧಕವಾಗಿ ಮಾತ್ರ ಬಳಸಲಾಗುತ್ತದೆ. ಇವೆಲ್ಲಕ್ಕಿಂತ ಮೊದಲು ಸ್ಮಾರ್ಟ್ ಸಿಟಿಯಾಗಲಿರುವ 20 ನಗರಗಳಲ್ಲಿ ಮಂಗಳೂರು ಆಯ್ಕೆಯಾಗಬೇಕಾಗಿದೆ. ಅದಕ್ಕೆ ಪೂರಕವಾದ ‘ಕಾನ್ಸೆಪ್ಟ್ ರಿಪೋರ್ಟ್’ ತಯಾರಿಸಲು ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ. ಇದು ಯೋಜನಾ ವರದಿಯಲ್ಲ ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಲು ಉದ್ಯಮಿ ಗಳು ಮುಂದೆ ಬರುವುದಿಲ್ಲ. ಈ ಬಗ್ಗೆಯೂ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಲೋಬೊ ತಿಳಿಸಿದರು.

ಮನಪಾ ಆಯುಕ್ತ ಗೋಪಾಲಕೃಷ್ಣ ಹಾಗೂ ಪಾಲಿಕೆಯ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment