ಕನ್ನಡ ವಾರ್ತೆಗಳು

ಸುರತ್ಕಲ್ – ಬಿ.ಸಿ ರೋಡ್ ಹೆದ್ದಾರಿಯ ಎಲ್ಲಾ ಟೋಲ್‌ಗೇಟ್‌ಗಳಿಗೆ ಯುಪಿಎ ಸರ್ಕಾರವೇ ಹೊಣೆ : ಮಾಜಿ ಸಚಿವ ಪಾಲೆಮಾರ್ ಆರೋಪ

Pinterest LinkedIn Tumblr

palemar_meet_photo_1

ಮಂಗಳೂರು,ಅ.10 : ಸುರತ್ಕಲ್ – ಬಿ.ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಎಲ್ಲಾ ಟೋಲ್‌ಗೇಟ್ ರಚನೆಯ ಪ್ರಕ್ರಿಯೆಗಳು ಕೇಂದ್ರದಲ್ಲಿ ಈ ಹಿಂದೆ ಇದ್ದ ಯು.ಪಿ.ಎ ಸರಕಾರದ ಅವಧಿಯಲ್ಲೇ ನಡೆದಿದ್ದು, ಇದೀಗ ” ಸುರತ್ಕಲ್ ಎನ್‌.ಐ.ಟಿ.ಕೆ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಟೋಲ್‌ಗೇಟ್‌ಗೆ ಯುಪಿಎ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಸಚಿವ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ( ಸುರತ್ಕಲ್ ಮಂಡಲ) ದ ಅಧ್ಯಕ್ಷ ಕೃಷ್ಣ ಜೆ ಪಾಲೆಮಾರ್ ಆರೋಪಿಸಿದ್ದಾರೆ.

ಸುರತ್ಕಲ್ ಎನ್‌.ಐ.ಟಿ.ಕೆ ಸಮೀಪ ನಿರ್ಮಾಣಗೊಂಡಿರುವ ಟೋಲ್‌ಗೇಟ್ ವಿರುದ್ಧ ಸುರತ್ಕಲ್ ನಾಗರೀಕ ಸಮಿತಿ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ಅನುಪಸ್ಥಿತಿ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಮತ್ತು ವ್ಯಕ್ತವಾದ ಸಂಶಯಗಳ ಬಗ್ಗೆ ಸೃಷ್ಟೀಕರಣ ನೀಡುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಗರದ ಹೋಟೆಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೋಲ್‌ಗೇಟ್ ನಿರ್ಮಾಣ ಹಾಗೂ ಈ ಹೆದ್ದಾರಿಯಲ್ಲಿರುವ ಸರ್ವೀಸ್ ರಸ್ತೆ ಸಹಿತ ಎಲ್ಲಾ ಸಮಸ್ಯೆಗಳಿಗೂ ಯುಪಿಎ ಸರ್ಕಾರವೇ ಕಾರಣ. ಆದರೆ ಶಾಸಕ ಬಿ.ಎ. ಮೊಯ್ದೀನ್ ಬಾವ ಹಾಗೂ ನಾಗರಿಕ ಸಮಿತಿ ಈ ವಿಚಾರಗಳ ಬಗ್ಗೆ ಚಕಾರವೆತ್ತದೆ ಸತ್ಯಾಂಶವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ.” ಆಸ್ಕರ್‌ ಫರ್ನಾಂಡಿಸ್‌ ಅವರ ಅಧಿಕಾರಾವಧಿಯಲ್ಲಿಯೇ ಇದರ ಪ್ರಕ್ರಿಯೆಗಳು ನಡೆದಿವೆ. ಇದೆಲ್ಲ ಗೊತ್ತಿದ್ದೂ ಫರ್ನಾಂಡಿಸ್‌ ಅವರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಜನರ ಕಣ್ಣಲ್ಲಿ ಮಂಕುಬೂದಿ ಎರಚುತ್ತಿದ್ದಾರೆ ಎಂದು ದೂರಿದರು.

palemar_meet_photo_2

” ಶಾಸಕ ಮೊಯ್ದಿನ್ ಬಾವಾ ಅವರು ಮಾಡಿದ ತಪ್ಪನ್ನು ಮರೆಮಾಚಲು ಮತ್ತು ಸ್ವಂತ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೆ, ಶಾಸಕರ ಏಜೆಂಟರಂತೆ ವರ್ತಿಸುತ್ತಿರುವ ನಾಗರಿಕ ಸಮಿತಿಯ ಪ್ರಮುಖರ ಪ್ರತಿಭಟನಾ ಪ್ರಹಸನ ಹಾಸ್ಯಾಸ್ಪದವಾಗಿದೆ. ಸುರತ್ಕಲ್ ಪರಿಸರದ ಜನತೆಗೆ ಇಂತಹ ಕಪಟ ನಾಗರಿಕ ಸಮಿತಿಗಳ ಅಗತ್ಯವಿಲ್ಲ. ಕಾಳಜಿಯಿಂದ ಹೋರಾಟ ನಡೆಸುವ ಸಂಘಟನೆಗಳು ಇಲ್ಲಿವೆ. ನಾಗರಿಕ ಸಮಿತಿ ಮತ್ತು ಶಾಸಕರು ಇಲ್ಲಿನ ಜನತೆಯನ್ನು ಮೋಸಗೊಳಿಸಲು ಸಾಧ್ಯವಿಲ್ಲ.” ಎಂದರು.

” ಈ ಮೊದಲು ನಡೆದ ಟೋಲ್‌ಗೇಟ್ ವಿರೋಧಿ ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಜನಜಾಗೃತಿ ಮೂಡಿಸಿದ್ದರು. ಆದರೆ ಶಾಸಕ ಮೊಯ್ದೀನ್ ಬಾವಾ ಕೃಪಾಪೋಷಿತ ನಾಗರಿಕ ಸಮಿತಿ ಕಾಂಗ್ರೆಸ್ ಅವಧಿಯಲ್ಲಿನ ತಪ್ಪುಗಳನ್ನು ಮರೆಮಾಚಲು ಜಿಲ್ಲಾಧಿಕಾರಿಯವರನ್ನು ದುರುಪಯೋಗಪಡಿಸಿಕೊಂಡು ತಾತ್ಕಾಲಿಕ ತಡೆ ನೀಡುವ ನಾಟಕವಾಡಿದ್ದಾರೆ. ಹೋರಾಟ ಕಾಂಗ್ರೆಸ್ ವೇದಿಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಆ ಸಮಿತಿಯೊಂದಿಗೆ ಸೇರಿರಲಿಲ್ಲ.” ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಸದಸ್ಯ ತಿಲಕ್‌ರಾಜ್, ಮಾಜಿ ಮೇಯರ್ ಶಂಕರ್ ಭಟ್, ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ವಸಂತ ಹೊಸಬೆಟ್ಟು, ಸುರತ್ಕಲ್ ನಗರ ಶಕ್ತಿಕೇಂದ್ರ ಅಧ್ಯಕ್ಷ ಮಹೇಶ್‌ಮೂರ್ತಿ, ಅಶೋಕ್ ಕೃಷ್ಣಾಪುರ ಉಪಸ್ಥಿತರಿದ್ದರು.

Write A Comment