ಮಂಗಳೂರು, ಅ.10: ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಚಟುವಟಿಕೆಯಲ್ಲಿ ಬಳಸಿಕೊಂಡ ಅಶ್ಲೀಲ ನೀಲಿಚಿತ್ರ ಹಾಗೂ ಸೆಕ್ಸ್ ವೀಡಿಯೋಗಳು, ಅನಿಮಲ್ ಸೆಕ್ಸ್ ವೀಡಿಯೋ, ಮಕ್ಕಳ ಸೆಕ್ಸ್ ಸೈಟ್‌ಗಳು, ಟ್ವೀಟರ್ ಹಾಗೂ ಇತರ ನೂರಾರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ, ವಿತರಣೆ, ಪ್ರಸಾರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳು ಮೊಬೈಲ್‌ಗಳಲ್ಲಿ ಹಾಗೂ ಸೈಬರ್ ಕೇಂದ್ರಗಳಲ್ಲಿ ನೀಲಿಚಿತ್ರಗಳನ್ನು ವೀಕ್ಷಿಸುವುದು, ಪರಸ್ಪರ ವರ್ಗಾವಣೆ ಮಾಡುತ್ತಿರುವುದು ಹೆಚ್ಚು ಕಂಡು ಬರುತ್ತಿದೆ. ಇದು ಮಕ್ಕಳ ಮನೋಸ್ಥಿತಿಯ ಮೇಲೆ ತೀವ್ರ ಪ್ರತಿಕೂಲ ಪರಿಣಾಮವನ್ನು ಬೀರುವಂತಹವುಗಳಾಗಿದ್ದು, ಮಕ್ಕಳನ್ನು ಬಳಸಿಕೊಂಡ ಅಶ್ಲೀಲ ನೀಲಿಚಿತ್ರ ಹಾಗೂ ಸೆಕ್ಸ್ ವೀಡಿಯೋ ಸೈಟ್‌ಗಳನ್ನು, ಸಾಮಾಜಿಕ ಜಾಲತಾಣಗಳನ್ನು, ಟ್ವೀಟರ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ, ನಗರದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಿಯೋಗ ತೆರಳಿ ದೂರು ನೀಡಲಾಗಿದೆ ಎಂದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ನಗರದ ಸಾಮಾಜಿಕ ಕಾರ್ಯಕರ್ತರಾದ ಐ.ಟಿ ಇಂಜಿನಿಯರ್ ಶ್ರೀ ಸಂತೋಷ ಕುಮಾರ್ ಸಮಂತರವರು ಹೇಳಿದರು.
ಮಂಗಳೂರು ದಕ್ಷಿಣ, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ, ಐ.ಟಿ ಕಾಯಿದೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ, ಪೋಕ್ಸೋ ಸೆಕ್ಷನ್ ಅಡಿ, ಎಫ್.ಐ.ಆರ್ ದಾಖಲಾಗಿದೆ ಎಂದು ತಿಳಿಸಿದ ಅವರು, ಪಡಿ ಸಂಸ್ಥೆಯ ನಿರ್ದೇಶಕರಾದ ಶ್ರೀ ರೆನ್ನಿ ಡಿ’ಸೋಜ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ನಿರ್ದೇಶಕರಾದ ಪ್ರೋಫೆಸರ್ ಹಿಲ್ಡಾ ರಾಯಪ್ಪನ್, ಮಕ್ಕಳ ಸಹಾಯವಾಣಿ ಮಂಗಳೂರು ಚೈಲ್ಡ್‌ಲೈನ್-1098ನ ಸಂಯೋಜನಾಧಿಕಾರಿ ಯೋಗೀಶ್ ಮಲ್ಲಿಗೆಮಾಡು, ನಾಗರಾಜ್ ಪಣಕಜೆ, ಅಸುಂತಾ ಡಿ’ಸೋಜ, ಮನಃಶಾಸ್ತ್ರ ತಜ್ಞರುಗಳುರವರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ನಿಯೋಗದಲ್ಲಿದ್ದರು ಎಂದು ತಿಳಿಸಿರುತ್ತಾರೆ.
ಮಕ್ಕಳನ್ನು ಲೈಂಗಿಕ ಚಟುವಟಿಕೆಯಲ್ಲಿ ಬಳಸಿಕೊಳ್ಳುವುದು ಅಥವಾ ಅವುಗಳನ್ನು ಚಿತ್ರೀಕರಿಸಿ, ಪ್ರಸಾರ ಮಾಡುವುದು, ಮಕ್ಕಳಿಗೆ ಸೆಕ್ಸ್ ಚಿತ್ರಗಳನ್ನು ಪ್ರದರ್ಶಿಸುವುದು, ಅವರ ಹೆಸರಿನ ಜಾಲತಾಣ ಸಾಮಾಜಿಕ ಟ್ವೀಟರ್ ಖಾತೆಗಳಿಗೆ ಸೆಕ್ಸ್ ವೀಡಿಯೋ ಚಿತ್ರಗಳನ್ನು ಕಳುಹಿಸುವುದು, ಮಕ್ಕಳ ಸೆಕ್ಸ್ ವೀಡಿಯೋ ಚಿತ್ರಗಳನ್ನು ವೀಕ್ಷಿಸುವುದು, ಪ್ರಸಾರ, ಹಂಚಿಕೆ, ವಿತರಣೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ. ಆದರೆ ಇಂತಹ ಸೆಕ್ಸ್ ವೀಡಿಯೋ ಸೈಟ್‌ಗಳು ನಿರಂತರವಾಗಿ ಕಾರ್ಯಾಚರಿಸುತ್ತಿದೆ, ಈ ಬಗ್ಗೆ ಯಾರು ಕೂಡ ಮುತುವರ್ಜಿ ವಹಿಸುತ್ತಿಲ್ಲ ಎಂದ ಅವರು, ಅಶ್ಲೀಲ ಚಿತ್ರಗಳು ಮಕ್ಕಳ ಮನಸ್ಸನ್ನು ತೀವ್ರವಾಗಿ ಕೆರಳಿಸುತ್ತದೆ. ಸಮಾಜದಲ್ಲಿ ಮಕ್ಕಳು ದಾರಿ ತಪ್ಪುವಂತೆ ಮಾಡುವುದಲ್ಲದೇ, ಲೈಂಗಿಕ ಅತ್ಯಾಚಾರದಂತಹ ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ|| ಶರಣಪ್ಪ ಹಾಗೂ ನಗರ ಪೊಲೀಸ್ ಉಪ ಆಯುಕ್ತರಾದ ಶ್ರೀ ಶಾಂತರಾಜು ಹಾಗೂ ಪಾಂಡೇಶ್ವರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿ, ಎ.ಎಸ್.ಐ ಬಿ.ಕೃಷ್ಣ ಅವರನ್ನು ಭೇಟಿಯಾದ, ವಿವಿಧ ಸಂಸ್ಥೆಗಳ ನಿಯೋಗದ ಪ್ರತಿನಿಧಿಗಳು, ಜನ ಸಮುದಾಯ ಹಾಗೂ ಇಲಾಖಾಧಿಕಾರಿಗಳಲ್ಲಿ ಜಾಗೃತಿಯನ್ನು ಮೂಡಿಸುವಂತೆ, ಮಕ್ಕಳನ್ನು ಬಳಸಿಕೊಂಡ ಅಶ್ಲೀಲ ನೀಲಿಚಿತ್ರ ಹಾಗೂ ಸೆಕ್ಸ್ ವೀಡಿಯೋ ಸೈಟ್‌ಗಳನ್ನು, ಸಾಮಾಜಿಕ ಜಾಲತಾಣಗಳನ್ನು, ಟ್ವೀಟರ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ, ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಮಾನವ ಹಕ್ಕು ಆಯೋಗ, ಗೃಹ ಇಲಾಖೆ ಹಾಗೂ ಸರಕಾರಕ್ಕೆ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ದೂರು ನೀಡಲಾಗುವುದು ಎಂದು ಪಡಿ ಸಂಸ್ಥೆಯ ನಿರ್ದೇಶಕರಾದ ಶ್ರೀ ರೆನ್ನಿ ಡಿ’ಸೋಜ ರವರು ತಿಳಿಸಿರುತ್ತಾರೆ.
ಉತ್ತಮ ಸಮಾಜ ನಿರ್ಮಾಣ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಇಂತಹ ಅಶ್ಲೀಲ ನೀಲಿಚಿತ್ರ ಹಾಗೂ ಸೆಕ್ಸ್ ವೀಡಿಯೋಗಳನ್ನು ಆಪ್‌ಲೋಡ್ ಮಾಡುವ, ಹಂಚಿಕೆ, ಪ್ರಸಾರ ಮಾಡುವ ವ್ಯಕ್ತಿ ಹಾಗೂ ಕಂಪೆನಿಗಳನ್ನು ಹಾಗೂ ನಕಲಿ ಟ್ವೀಟರ್, ಸಾಮಾಜಿಕ ಜಾಲತಾಣ ಖಾತೆಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿನ ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಇಲಾಖಾಧಿಕಾರಿಗಳನ್ನು ವಿನಂತಿಕೊಳ್ಳಲಾಯಿತು ಎಂದು ತಿಳಿಸಿರುತ್ತಾರೆ.
