ಮಂಗಳೂರು, ಅ.08 : ಕೂಲಿ ಹೆಚ್ಚಳ ಮಾಡದೆ ತಲೆಹೊರೆ ಕಾರ್ಮಿಕರನ್ನು ಸತಾಯಿಸುತ್ತಿರುವ ಮಾಲಕ ವರ್ಗದ ದುರ್ವರ್ತನೆಯನ್ನು ಖಂಡಿಸಿ ಬಂದರು ಪ್ರದೇಶದ ತಲೆ ಹೊರೆ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 2ನೆ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದ ಅಂಗವಾಗಿ ದ.ಕ ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಮೈದಾನ ರಸ್ತೆಯಲ್ಲಿರುವ ಸಿಐಟಿಯು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟು ಮಾರಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಯೆದುರು ಜಮಾಯಿಸಿದರು.
ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುನೀಲ್ಕುಮಾರ್ ಬಜಾಲ್ ಮಾತನಾಡಿ, ನಗರದ ಕೂಲಿ ಕಾರ್ಮಿಕರ ಬದುಕಿಗೆ ಸಂಬಂಧಿಸಿ ಕಳೆದೆರಡು ದಿನಗಳಿಂದ ಮುಷ್ಕರ ನಡೆಯುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳು ಚಕಾರವೆತ್ತದಿರುವುದನ್ನು ನೋಡಿದರೆ ಅವರೆಲ್ಲರೂ ಮಾಲಕರ ಪರವಾಗಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು. ಆದಷ್ಟು ಬೇಗ ಕಾರ್ಮಿಕರ ಕೂಲಿ ಹೆಚ್ಚಳ ಮಾಡದಿದ್ದಲ್ಲಿ ರಸ್ತೆ ತಡೆ, ಮಾಲಕರ ಸಂಘದ ಕಚೇರಿಗೆ ಮುತ್ತಿಗೆ ಇತ್ಯಾದಿಯಾಗಿ ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಂದರು ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅಹ್ಮದ್ ಬಾವ ಸಿಐಟಿಯು ಮುಖಂಡರಾದ ಯೋಗೀಷ್, ಜಪ್ಪಿನಮೊಗರು, ಪ್ರೇಮನಾಥ ಜಲ್ಲಿಗುಡ್ಡೆ, ದಿನೇಶ ಶೆಟ್ಟಿ, ಡಿವೈಎಫ್ಐ ನಾಯಕರಾದ ಬಿ.ಕೆ.ಇಮ್ತಿಯಾಝ್, ರಫೀಕ್ ಹರೇಕಳ, ನವೀನ್ ಕೊಂಚಾಡಿ ಮಾತನಾಡಿದರು.
ಹೋರಾಟದ ನೇತೃತ್ವವನ್ನು ಬಂದರು ಹಮಾಲಿ ಕಾರ್ಮಿಕರ ಸಂಘದ ಮುಖಂಡರಾದ ಅಸ್ಲಂ ಬೆಂಗ್ರೆ, ಅಹ್ಮದ್ ಬಾವ, ಹನೀಫ್, ನಾರಾಯಣ, ಜಯಾ, ಸುಲೋಚನಾ, ಕುಶಲ, ಶಕುಂತಳಾ, ನಝೀರ್ ಬೆಂಗ್ರೆ ಮುಂತಾದವರು ವಹಿಸಿದ್ದರು.




