ಮಂಗಳೂರು,ಅ.08 : ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕ್ರೈಸ್ತ ಕುಟುಂಬದ ಮನೆಯೊಂದರಲ್ಲಿ ಕೆಲಸದಲ್ಲಿದ್ದ ಇಬ್ಬರು ಬಾಲ ಕಾರ್ಮಿಕರನ್ನು ಕಾರ್ಮಿಕ ಇಲಾಖಾ ಅಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ.
ಸುಮಾರು 95 ವಯಸ್ಸಿನ ವೃದ್ಧೆಯ ಆರೋಗ್ಯ ನೋಡಿಕೊಳ್ಳಲು ಆಕೆಯ ಪುತ್ರಿ ಈ ಇಬ್ಬರು ಮಕ್ಕಳನ್ನು ನೇಮಿಸಿದ್ದಾರೆ ಎಂಬ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಚೈಲ್ಡ್ ಲೈನ್ ಅಧಿಕಾರಿಗಳು ಮನೆಗೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಮಕ್ಕಳನ್ನು ಸದ್ಯ ಬೋಂದೆಲ್ ಬಾಲ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಗುರುವಾರ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ವಯಸ್ಸಿನ ಕುರಿತಂತೆ ತಪಾಸಣೆ ನಡೆಸಲಾಗುವುದು ಎಂದು ಸೀನಿಯರ್ ಲೇಬರ್ ಇನ್ಸ್‌ಪೆಕ್ಟರ್ ಕುಮಾರ್ ತಿಳಿಸಿದ್ದಾರೆ. ಮಕ್ಕಳು ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಸುಮಾರು 11 ಮತ್ತು 12 ವರ್ಷದ ಬಾಲಕಿಯರು ಎಂದು ತಿಳಿದು ಬಂದಿದ್ದೆ.
ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾರ್ಮಿಕ ಅಧಿಕಾರಿಗಳಾದ ಜಿ.ಜಿ. ಮೈಲಾರಪ್ಪ , ಶ್ರೀಪತಿರಾಜು, ಮೇರಿ ಪಿ.ಡಯಾಸ್, ಗಣಪತಿ ಹೆಗಡೆ, ಯೋಜನಾ ನಿರ್ದೇಶಕ ಶ್ರೀನಿವಾಸ್, ಚೈಲ್ಡ್‌ಲೈನ್ ಅಧಿಕಾರಿಗಳು, ಡಿಸಿಪಿಯು ಅಧಿಕಾರಿಗಳು ಮತ್ತು ಕದ್ರಿ ಪೊಲೀಸರು ಪಾಲ್ಗೊಂಡಿದ್ದರು.







