ಮಂಗಳೂರು, ಅ.4: ಉಪ್ಪಿನಂಗಡಿಯ ನೇತ್ರಾವತಿ ಸೇತುವೆ (ರಾಷ್ಟ್ರೀಯ ಹೆದ್ದಾರಿ) ಬಳಿ ಅರಣ್ಯ ಸಂಚಾರಿ ದಳದ ವಲಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ಮಾಡಲಾಗುತ್ತಿದ್ದ ಮರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಓರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ, ಹಾಗೂ ಉಪವಲಯ ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ನೆಲ್ಯಾಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯನ್ನು ತಡೆದುನಿಲ್ಲಿಸಿ ಪರಿಶೀಲಿಸಿದಾಗ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಾಡುಜಾತಿ ಹಾಗೂ ಕಿರಾಲ್ಬೋಗಿ ಜಾತಿಯ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂತು. ಪ್ರಕರಣಕ್ಕೆ ಸಂಬಂಧಿಸಿ ಸುಮಾರು 9. 776 ಘ.ಮೀ ಮರದ ದಿಮ್ಮಿ, ಹಾಗೂ ಲಾರಿಯನ್ನು ಸ್ವಾಧೀನಪಡಿಸಿಕೊಂಡ ಅಧಿಕಾರಿಗಳು, ಆರೋಪಿ ಮುಹಮ್ಮದ್ ಎಂಬಾತನನ್ನು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜೆ. ಕ್ಲಿಫರ್ಡ್ ಲೋಬೋ, ಉಪವಲಯ ಅರಣ್ಯ ಅಧಿಕಾರಿಕಾರಿಗಳಾದ ವಿನೋದ್ ಗೌಡ ಡಿ.ಎಸ್., ಸಂದೀಪ್ ಸಿ.ಕೆ., ಮಹಾಬಲ ಡಿ.ಎಸ್. ಹಾಗೂ ಅನಿಲ್. ಕೆ. ಭಾಗವಹಿಸಿದ್ದರು. ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಸದಾಶಿವ ಭಟ್ ನಿರ್ದೇಶನದಲ್ಲಿ ವಲಯ ಅರಣ್ಯಾಧಿಕಾರಿ ಜೆ ಕ್ಲಿಫರ್ಡ್ ಲೋಬೊ ಮುಂದಿನ ತನಿಖೆ ನಡೆಸುತ್ತಿದ್ದಾರೆ.
