ಮಂಗಳೂರು,ಅ.4:ಬ್ಯಾರಿ ಭಾಷೆಯ ಬಳಕೆಯಿಂದಾಗಿ ಉಳಿದಿದೆ. ಆದ್ದರಿಂದ ಭಾಷೆಯನ್ನು ಜನರು ಹೆಚ್ಚು ಹೆಚ್ಚು ಬಳಸುವಂತೆ ಮಾಡಲು ಅಕಾಡಮಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬ್ಯಾರಿ ಅಕಾಡಮಿ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ನಗರದ ಟ.ವಿ.ರಮಣ್ ಪೈ ಸಭಾಂಗಣದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಸಂದರ್ಭದಲ್ಲಿ ಬ್ಯಾರಿ ಸಾಹಿತಿಗಳನ್ನು ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಯಾವುದೇ ಭಾಷೆಯನ್ನು ಜನರು ಬಳಸದೆ ಇದ್ದಾಗ ಅದು ನಾಶವಾದ ಸಾಕಷ್ಟು ಉದಾಹರಣೆಗಳಿವೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಾಠಿ ನಾಯಕ ಜನಾಂಗದವರು ತಮ್ಮದೇ ಆದ ಭಾಷೆಯನ್ನು ಬಳಸುತ್ತಿದ್ದರೂ ಪ್ರಸಕ್ತ ಆ ಭಾಷೆಯ ಶೇ 90 ಭಾಗ ಕಣ್ಮರೆಯಾಗಿದೆ. ಭಾಷೆ ಜನರು ಬಳಸಲು ಸಹಾಯವಾಗುವಂತೆ ಪೂರಕ ಚಟುವಟಿಕೆಗಳನ್ನು ಅಕಾಡಮಿಗಳು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.
ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್‌ರವರು ಬ್ಯಾರಿ ಭಾಷಾ ದಿನಾಚರಣೆಯನ್ನು ಹಾಗೂ ಮಾಸಾಚರಣೆಯ ಕಾರ್ಯಕ್ರಮಕ್ಕೆ ಲಾಂಛನವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಅಕಾಡಮಿಗಳು ಭಾಷಾಬೆಳವಣಿಗೆಗೆ ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಬ್ಯಾರಿ ಭಾಷೆ ಮಾತನಾಡಬಲ್ಲ ಬ್ಯಾರಿಯೇತರರಿಗೆ ಪ್ರಾತಿನಿಧಿಕವಾಗಿ ಸನ್ಮಾನ ಕಾರ್ಯಕ್ರಮದಲ್ಲಿ ಬಜ್ಪೆ ರಘುನಾಥ ಶೆಣೈಯವರನ್ನು ಸನ್ಮಾನಿಸಿದರು.
ಇದೇ ವೇಳೆ ಸಚಿವ ರಮಾನಾಥ ರೈಯವರು ಫಕ್ರುದ್ದೀನ್ ಇರುವೈಲ್‌ರ ‘ಕಿರ್ಫ’ ಕಥಾ ಸಂಕಲನವನ್ನು ಬಿಡುಗಡೆ ಮಾಡಿದರು.
ಬ್ಯಾರಿ ಭಾಷೆಗಾಗಿ ಕೊಡುಗೆ ನೀಡಿದ ಸಾಧಕರಾದ ಮುಹಮ್ಮದ್ ಬಡ್ಡೂರು, ಅಶ್ರಫ್ ಅಪೊಲೊ, ಬಶೀರ್ ಅಹ್ಮದ್ ಕಿನ್ಯಾ, ರಶೀದ್ ನಂದಾವರ, ಮರಿಯಮ್ ಇಸ್ಮಾಯೀಲ್, ಅಬ್ದುಲ್ ಅಝೀಝ್ ಹಕ್, ಅಬ್ದುಲ್ ಖಾದರ್ ಕುತ್ತೆತ್ತೂರು , ಆಯಿಶಾ ಯು.ಕೆ. ಉಳ್ಳಾಲರನ್ನು ಅವರು ಸನ್ಮಾನಿಸಿದರು.
ಶಾಸಕರಾದ ಮೊಯ್ದಿನ್ ಬಾವ ಮತ್ತು ಐವನ್ ಡಿಸೋಜ ಮಾತನಾಡಿ, ಬ್ಯಾರಿ ಭವನ ನಿರ್ಮಾಣಕ್ಕೆ ಸರಕಾರದ ನೆರವಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸತ್ಯನಾರಾಯಣ ಮಲ್ಲಿಪಟ್ಣ ಭಾಷಾ ವೈವಿಧ್ಯತೆ ಬಗ್ಗೆ ವಿಷಯ ಮಂಡಿಸಿ, ಯಾವುದೇ ಭಾಷೆಯನ್ನು ಮಾತನಾಡುವವರು ಇರುವವರೆಗೆ ಆ ಭಾಷೆ ನಾಶವಾಗಲು ಸಾಧ್ಯವಿಲ್ಲ. ಲಿಪಿ ಇರುವ ಭಾಷೆಗಳೇ ಶ್ರೆಷ್ಠ ಎನ್ನುವ ಕಲ್ಪನೆ ಸರಿಯಲ್ಲ ಎಂದವರು ನಿದರ್ಶನಗಳನ್ನು ನೀಡಿ ವಿವರಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಶುಭಾಶಂಸನೆಗೈದರು. ಮುಡಾ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಮನಪಾ ಸದಸ್ಯ ರಾಜೇಂದ್ರಕುಮಾರ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಹಾಗೂ ಸಜಿಪನಡು ಗ್ರಾಪಂ ಅಧ್ಯಕ್ಷ ನಾಸಿರ್ ಸಜಿಪ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಇದರ ಪ್ರತಿನಿಧಿ ಮುಮ್ತಾಝ್ ಅಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಪತ್ರಕರ್ತ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು.
ಬ್ಯಾರಿ ಭಾಷಾ ದಿನದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಯ ವಿಜೇತರಿಗೆ, ದೇಶ ವಿದೇಶದಲ್ಲಿ ಬ್ಯಾರಿ ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರುವ-ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಶಾಸಕ ಜೆ.ಆರ್.ಲೋಬೊ ಅಹ್ಮ್ಮದ್ ಅನ್ವರ್‌ರ ಆಕರ್ಷಕ ಛಾಯಾಚಿತ್ರ ಮತ್ತು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು.
ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಕಾಡಮಿಯ ಸದಸ್ಯರಾದ ಅಬ್ಬಾಸ್ ಕಿರುಗುಂದ, ಅಬ್ದುಲ್ ಹಮೀದ್ ಗೋಳ್ತಮಜಲು, ಯೂಸುಫ್ ವಕ್ತಾರ್, ಟಿ.ಎ.ಅಲಿಯಬ್ಬ, ಝೊಹರಾ ಅಬ್ಬಾಸ್, ಎ.ಎ. ಆಯಿಶಾ ಪೆರ್ಲ, ಅಬ್ದುಲ್ಲತೀಫ್ ನೇರಳಕಟ್ಟೆ, ಮುಹಮ್ಮದ್ ಶರೀಫ್ ನಿರ್ಮುಂಜೆ, ಮುಹಮ್ಮದ್ ಝಕರಿಯಾ ಕಲ್ಲಡ್ಕ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸಾಹಿತಿ ಬಿ.ಎ.ಮುಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು.
ವರದಿ ಕೃಪೆ : ವಾಭಾ

































