ಮಂಗಳೂರು, ಅ.3: ಜಗತ್ತಿನ ಸೌಂದರ್ಯ ವೀಕ್ಷಿಸಲು ಇವರಿಗೆ ಕಣ್ಣುಗಳಿಲ್ಲದಿದ್ದರೇನಂತೆ, ತಮ್ಮ ಸುಮಧುರ ಕಂಠಗಳ ಮೂಲಕ ಇವರು ಸಂಗೀತ ಪ್ರಿಯರನ್ನು ಮೋಡಿ ಮಾಡ ಬಲ್ಲರು. ಇವರು ವೃತ್ತಿಪರ, ತರಬೇತು ಪಡೆದ ಸಂಗೀತಗಾರರಲ್ಲದಿದ್ದರೂ ಇವರು ಲಯಬದ್ಧವಾಗಿ ಹಾಡಬಲ್ಲರು. ಹಾಡಲು ರಂಗುರಂಗಿನ ವೇದಿಕೆ ಇಲ್ಲವಾದರೂ ಮಣ್ಣಿನ ನೆಲದಲ್ಲೇ ತಮ್ಮ ಸಂಗೀತ ಪರಿಕರಗಳೊಂದಿಗೆ ಕುಳಿತು ಜನಪ್ರಿಯ ಚಲನಚಿತ್ರಗೀತೆಗಳನ್ನು ಹಾಡುವ ಮೂಲಕ ಶೋತೃಗಳಿಗೆ ಸಂಗೀತ ದ ರಸದೌತಣ ನೀಡಬಲ್ಲರು. ತಮ್ಮ ಹಾಡು ಗಳನ್ನು ಮೆಚ್ಚಿ ಕೇಳುಗರ ಕರತಾಡನವೇ ಇವರ ಜೀವನೋತ್ಸಾಹ. ಅವರು ನೀಡುವ ಧನಸಹಾಯವೇ ಇವರ ಬದುಕಿನ ಆಧಾರ.
ಇದು ನಗರದ ಎನ್‌ಜಿಒ ಸಭಾಂಗಣದಲ್ಲಿ ಶುಕ್ರವಾರ ಸಂಜೆಯ ವೇಳೆ ಕಂಡುಬಂದ ಅಂಧ ಸಂಗೀತ ಕಲಾವಿದರ ತಂಡದ ಮನ ಕಲಕುವ ದೃಶ್ಯ.
ಶಿರಸಿ ತಾಲೂಕಿನ ಶ್ರೀ ಅನ್ನ ಪೂರ್ಣೇಶ್ವರಿ ಅಂಧರ ಗೀತ-ಗಾಯನ ಕಲಾ ತಂಡದ 14 ಗಾಯಕ ಸದಸ್ಯರಲ್ಲಿ ಎಂಟು ಮಂದಿ ನೆಲದಲ್ಲಿ ಕುಳಿತು ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ಇವರೇ ಆ ಹಾಡುಗಳ ಹಿನ್ನೆಲೆ ಗಾಯಕರೋ ಎನ್ನುವಂತ್ತಿತ್ತು. ಆದರೆ ಇವರ ಹಾಡಿಗೆ ಕರತಾಡನಕ್ಕೆ ಇದ್ದದ್ದು ಮಾತ್ರ ಬೆರಳೆಣಿಕೆಯ ಮಂದಿ ಮಾತ್ರ. ಸಂಗೀತವನ್ನೇ ತಮ್ಮ ಜೀವನೋತ್ಸಾಹ ವಾಗಿಸಿ, ಬದುಕಿಗೆ ಆಧಾರ ಮಾಡಿಕೊಂಡಿ ರುವ ಈ ತಂಡ 2011ರ ಮೇ ತಿಂಗಳಲ್ಲಿ ಆರಂಭಗೊಂಡಿದ್ದು, ಪ್ರಸ್ತುತ 14 ಮಂದಿ ಸದಸ್ಯರಿದ್ದಾರೆ. ಎಲ್ಲರೂ ಅಂಧರು.
ಈ ಅಂಧ ಕಲಾವಿದರು, ಸಾಯಿಬಾಬಾರ ಭಜನೆ, ಪುರಂದರದಾಸರ ಕೀರ್ತನೆ, ಡಾ. ರಾಜ್ ಕುಮಾರ್ ಅವರ ಸಿನೆಮಾ ಹಾಡು ಹಾಗೂ ಇತ್ತೀಚಿನ ಸಿನೆಮಾ ಹಾಡುಗಳು ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಹಾಡುತ್ತಾರೆ. ತಮ್ಮ ಹಾಡಿಗೆ ಶ್ರುತಿ ಸೇರಿಸಲು ತಬಲಾ, ಡೋಲಕ್, ಕೀಬೋರ್ಡ್ ಹಾಗೂ ರಿದಂ ಪ್ಯಾಡ್‌ಗಳನ್ನು ತಾವೇ ನುಡಿಸುತ್ತಾರೆ.
ಈ ಕಲಾವಿದರು ದೃಷ್ಠಿ ಹೀನರಾಗಿದ್ದು, ಇವರ ಸಂಗೀತಕ್ಕೆ ಸದ್ಯಕ್ಕೆ ಸಾಥ್ ನೀಡುತ್ತಿ ರುವುದು ಮೃದಂಗ, ಡೋಲಕ್ ಹಾಗೂ ಕಡಿಮೆ ವೆಚ್ಚದ ಕೀ ಬೋರ್ಡ್. ಸಿನೆಮಾದಲ್ಲಿ ಬಳಸುವ ಮ್ಯೂಸಿಕ್ ಅನ್ನು ರಿದಂ ಪ್ಯಾಡ್ ಮೂಲಕ ಅದೇ ತರಹ ಬಾರಿಸುವ ನೈಪುಣ್ಯತೆ ಯನ್ನು ತಂಡದ ಸದಸ್ಯರಾದ ಮುಸ್ತಾ ಹೊಂದಿದ್ದರೂ ಆರ್ಥಿಕ ಕೊರತೆಯ ಹಿನ್ನೆಲೆಯಲ್ಲಿ ತಂಡಕ್ಕೆ ಅದನ್ನು ಖರೀದಿಸಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಇದೆ.
ತಂಡದ ಅಧ್ಯಕ್ಷ ರಾಘವೇಂದ್ರ ಎಂ. ನಾಯಕ್ ಸುಮಾರು 200ರಷ್ಟು ಮೊಬೈಲ್ ಹಾಗೂ ದೂರವಾಣಿ ಸಂಖ್ಯೆಗಳನ್ನು ಮನನ ಮಾಡಿಕೊಂಡಿದ್ದಾರೆ. ಯಾವುದೇ ಸಂಕೇತಗಳು ಕಾಣದಂತಹ ಬಿಳಿ ಡಿಸ್‌ಪ್ಲೇಯಿರುವ ನೋಕಿಯಾ ಮೊಬೈಲ್ ಇವರು ಹೊಂದಿದ್ದು, ಯಾವುದೇ ನಂಬರ್ ಹೇಳಿದ ಕೂಡಲೇ ಮೊಬೈಲ್ ಅನ್ನು ಕಿವಿಯ ಬಳಿ ಇಟ್ಟು ನಂಬರ್ ಟೈಪ್ ಮಾಡಿಕೊಂಡು ರಿಂಗಾಯಿಸಬಲ್ಲರು. ರಿಂಗ್ ಬಂದಾಗ ಅದಕ್ಕೆ ಉತ್ತರಿ ಸಬಲ್ಲರು.
ಈ ತಂಡದಲ್ಲಿ ಆಂಧ್ರ ಪ್ರದೇಶದ ಯಾಸ್ಮಿನ್, ಮುಸ್ತಾ, ಬಿಜಾಪುರದ ರಾಮ ಕುಮಾರ್, ಶಿವಮೊಗ್ಗದ ರಾಮಚಂದ್ರ, ಕೆ.ಆರ್. ಬಸವರಾಜು, ಶೈಲೇಂದ್ರ ಸ್ವಾಮಿ, ಕಲಬುರ್ಗಿಯ ದೇವೇಂದ್ರ, ಚಿಕ್ಕಮಗಳೂರಿನ ಕೃಷ್ಣ, ಬೆಂಗಳೂರಿನ ಮಂಜಾಕ್ಷಿ, ಸುದರ್ಶನ್, ಕಾರವಾರದ ಆನಂದ ರಾಜು, ಹಾವೇರಿಯ ಪ್ರವೀಣ, ಬಳ್ಳಾರಿಯ ವೀರೇಶ್ ಇದ್ದಾರೆ. ಅವರಲ್ಲಿ, ದೇವೇಂದ್ರ ಅವರು ಡೋಲಕ್, ಕೃಷ್ಣ , ರಾಘವೇಂದ್ರ ಅವರು ತಬಲ ಬಾರಿಸಿದರೆ ಆನಂದ್ ರಾಜು ಹಾಗೂ ರಾಮಚಂದ್ರ ಅವರು ಜಾನಪದ ಗೀತೆ, ರಾಮ ಕುಮಾರ್ ಹಾಗೂ ಕೆ.ಆರ್. ಬಸವರಾಜು ಅವರು ಹಿಂದಿ, ಕನ್ನಡ ಹಾಗೂ ಮರಾಠಿ ಹಾಡುಗಳನ್ನು ಹಾಡುತ್ತಾರೆ. ಅಲ್ಲದೆ, ಉಳಿದವರು ಭಕ್ತಿಗೀತೆ, ಸಿನೆಮಾ ಹಾಡುಗಳನ್ನು ಹಾಡಬಲ್ಲರು.
ತಂಡದಲ್ಲಿರುವ ಎಲ್ಲಾ ಸದಸ್ಯರದ್ದು ಒಂದೊಂದು ಕಥೆ ವ್ಯಥೆ. ಸಂಗೀತವನ್ನೇ ತಮ್ಮ ಜೀವನಾಧಾರವಾಗಿಸಿ ಊರಿಂದೂರಿಗೆ ತೆರಳುತ್ತಾ ಕೇಳುಗರಿಗೆ ಮನರಂಜನೆ ನೀಡಿ ಅವರು ನೀಡುವ ಕಾಣಿಕೆಯಲ್ಲೇ ತೃಪ್ತಿಪಡುತ್ತಾರೆ. ಸತತ ಮೂರು ಗಂಟೆಗಳ ಕಾಲ ಕಾರ್ಯಕ್ರಮ ನೀಡುವ ಈ ತಂಡಕ್ಕೆ ಸದ್ಯ ದಾನಿಗಳ ನೆರವಿನ ಅಗತ್ಯವಿದೆ. ಕತ್ತಲೆಯ ಬದುಕಿನಿಂದ ಈ ತಂಡದ ಸದಸ್ಯರನ್ನು ಬದುಕಿನತ್ತ ಕೊಂಡೊಯ್ಯುವಲ್ಲಿ ಸಹೃದಯಿಗಳು ನೆರವಾಗಬೇಕಿದೆ.
ಈ ತಂಡಕ್ಕೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕವೂ ಸಹಾಯದ ಹಸ್ತ ಚಾಚಬಹುದಾಗಿದೆ.
ಮಾಹಿತಿಗಾಗಿ ರಾಘವೇಂದ್ರ ಎಂ. ನಾಯ್ಕ ಅವರ ನ್ನು ಈ ಕೆಳಗಿನ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದು. (9449060428) (ತಂಡದ ಸಿಂಡಿಕೇಟ್ ಬ್ಯಾಂಕ್ ಅಕೌಂಟ್ ನಂಬರ್ – 03032200201934 – ಶಿರಸಿ ಶಾಖೆ).
ವರದಿ ಕೃಪೆ : ವಾಭಾ
