ಮಂಗಳೂರು,ಅ.02 : ಮಂಗಳೂರು ತಾಲೂಕಿನ ಕಿನ್ನಿಗೋಳಿ ಗ್ರಾಮದ ಗಿಡಿಗೆರೆ ಎಂಬಲ್ಲಿ ವಾಸ್ತವ್ಯದಲ್ಲಿರುವ ಶ್ರಿಮತಿ ರಾಮಕ್ಕ ಮಹಾತ್ಮಾಗಾಂಧೀಜೀಯವರ ತತ್ತ್ವಾದರ್ಶದಂತೆ ಕೃಷಿಕರಾಗಿ, ದಲಿತ ಸಮಾಜದ ಪ್ರತಿಭಾನ್ವಿತರಾಗಿ, ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಪುರಸ್ಕೃತರಾಗಿ ಪಾಡ್ದನ ತಜ್ಞೆಯಾಗಿ, ಬಹುಮಾನ್ಯರಾಗಿರುತ್ತಾರೆ ಇವರನ್ನು ಗಾಂಧೀ ಜಯಂತಿ ಪ್ರಯುಕ್ತ ಸನ್ಮಾನಿಸಲಾಯಿತು.
ಜ್ಞಾನ, ನೀತಿ, ಕಲೆ, ನಂಬಿಕೆ, ನ್ಯಾಯ ಸಂಪ್ರದಾಯಗಳ ಒಟ್ಟಂದವೇ ಜಾನಪದ ಎಂಬುದಾಗಿ ಪಾಶ್ಚಾತ್ಯ ಜಾನಪದ ತಜ್ಞ ಟೈಲರ್ ಅಭಿಪ್ರಾಯ ಪಟ್ಟಿದ್ದಾನೆ. 1989 ರಲ್ಲಿ ಫೀನ್ಲಾಂಡಿನಿಂದ ಆಗಮಿಸಿದ ಜಾನಪದ ತಜ್ಞರ ತಂಡ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿ ಜಾನಪದ ಅಧ್ಯಯನ ನಡೆಸಿ, ಪಾಡ್ದನಗಳನ್ನು ಸಂಗ್ರಹಿಸಿ ಸಿರಿಪಾಡ್ದನ ಎಂಬ ಉದ್ಗ್ರಂಥವನ್ನು ಪ್ರಕಟಿಸಿತು. ಈ ತಂಡ ರಾಮಕ್ಕನನ್ನು ಭೇಟಿಯಾಗಿ ಪಾಡ್ದನದ ಸಂಪತ್ತನ್ನು ಸಂಗ್ರಹಿಸಿದೆ. ಸಿರಿಕರ್ಣಗ ಪೂವಳಕ್ಕೆ ದೈಯೆರ್ ಮೊದಲಾದ ಹಲವಾರು ದೀರ್ಘವಾದ ಪಾಡ್ದನ ಇವರಿಗೆ ಕಂಠಪಾಠ. ಇವರಿಂದ ಪಾಡ್ದನ ಸಂಗ್ರಹಿಸಿ ಹೆಸರು ಗಳಿಸಿದವರು ಬಹುಮಂದಿ. ಬಡತನದ ಬೇಗೆಯಲ್ಲಿ ತತ್ತರಿಸಿ ಕೃಷಿಕರಾಗಿ ಸ್ವಾಭಿಮಾನದಿಂದ ಬಾಳಿ ಬದುಕಿದ ಶ್ರೀಮತಿ ರಾಮಕ್ಕ ಮಹಾತ್ಮಾಗಾಂಧೀಜಿಯ೦ವರ ತತ್ತ್ವಾದರ್ಶಕ್ಕೆಉದಾಹರಣೆಯಾಗಿದ್ದಾರೆ.
