ಮಂಗಳೂರು, ಸೆ.28: ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮುದ್ರಾ ಸಾಲದ ಮಂಜೂರಾತಿ ಪತ್ರವನ್ನು ವಿತರಿಸಿ ಜಿಲ್ಲೆಯಲ್ಲಿ ಮುದ್ರಾ ಸಾಲದ ಮೆಗಾ ಕ್ಯಾಂಪ್‌ಗೆ ಚಾಲನೆ ನೀಡಲಾಯಿತು. ಸಂಸದ ನಳಿನ್‌ಕುಮಾರ್ ಕಟೀಲ್ ಕ್ಯಾಂಪ್‌ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದ.ಕ. ಜಿಪಂ ನೇತ್ರಾವತಿ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಲೀಡ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡ ಮುದ್ರಾ ಸಾಲ ಕ್ಯಾಂಪನ್ನ್ನುದ್ದೇಶಿಸಿ ನಳಿನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಜನಧನ್ ಯೋಜನೆಯಡಿ 1.60 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಇದರೊಂದಿಗೆ ರಾಷ್ಟ್ರದಲ್ಲಿಯೇ ಜಿಲ್ಲೆ ಅಗ್ರಸ್ಥಾನವನ್ನು ಗಳಿಸಿದೆ. ದೇಶದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಸಣ್ಣ ಉದ್ಯಮಿಗಳಿಗೆ ಮುದ್ರಾ ಯೋಜನೆಯ ಮೂಲಕ 50 ಸಾವಿರ ರೂ.ಗಳಿಂದ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯವನ್ನು ಪಡೆಯುವ ಅವಕಾಶವಿದೆ ಎಂದು ತಿಳಿಸಿದರು. ಶಾಸಕ ಮೊಯ್ದಿನ್ ಬಾವ ಮಾತನಾಡಿ, ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ಗುಡಿ ಕೈಗಾರಿಕೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹಿಂದೆ ಇದ್ದ ಸಾಲ ಯೋಜನೆಯನ್ನು ಮಾರ್ಪಡಿಸಿ ಮುದ್ರಾ ಸಾಲ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಸಿಂಡಿಕೇಟ್ ಬ್ಯಾಂಕ್‌ನ ಫೀಲ್ಡ್ ಜನರಲ್ ಮ್ಯಾನೇಜರ್ ಕೆ.ಟಿ.ರೈ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ನಬಾರ್ಡ್ ಬ್ಯಾಂಕ್‌ನ ಎಜಿಎಂ ಪ್ರಸಾದ್ ರಾವ್, ಲೀಡ್ ಬ್ಯಾಂಕ್‌ನ ಹಿರಿಯ ಪ್ರಬಂಧಕ ಪ್ರಭು ಅಳಗವಾಡಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಲೀಡ್ ಬ್ಯಾಂಕ್ ಉಪಮಹಾಪ್ರಬಂಧಕ ಕೆ.ನರೇಂದ್ರ ಕಾಮತ್ ಮಾತನಾಡಿ, ಕೃಷಿ ಮತ್ತು ಕೃಷಿ ಅವಲಂಬಿತ ಉದ್ಯಮವನ್ನು ಹೊರತು ಪಡಿಸಿ ಸಣ್ಣ ಕೈಗಾರಿಕೆ, ಉದ್ಯಮ ನಡೆಸಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಅವಕಾಶವಿದೆ. ಮೂರು ವಿಭಾಗದ ಸಾಲವನ್ನು ಈ ಯೋಜನೆ ಯಲ್ಲಿ ನಿಗದಿಪಡಿಸಲಾಗಿದೆ. ಶಿಶುಮುದ್ರಾ ಯೋಜನೆಯಲ್ಲಿ 50 ಸಾವಿರ ರೂ.ವರೆಗೆ ಸಾಲ, ಕಿಶೋರ್ ಯೋಜನೆಯಲ್ಲಿ 50 ಸಾವಿರದಿಂದ 5 ಲಕ್ಷ ರೂ.ವರೆಗೆ ಸಾಲ ಹಾಗೂ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಸಾಲ ನೀಡುವ ಯೋಜನೆ ಇದಾಗಿದೆ ಎಂದರು.