ಮಂಗಳೂರು, ಸೆ.26: ಅವೈಜ್ಞಾನಿಕ, ಅನುಪಯುಕ್ತ ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸಬೇಕು, ಕೋಲಾರ ಜಿಲ್ಲೆಯ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ಹಸಿರು ಪೀಠ ನ್ಯಾಯಾಲಯಕ್ಕೆ ನೀಡಲಾದ ನೀರಿನ ಹಕ್ಕಿನ ಅಫಿದಾವಿತನ್ನು ರಾಜ್ಯ ಸರಕಾರ ಹಿಂಪಡೆಯಬೇಕು, ಬೆಂಗಳೂರಿನಲ್ಲಿ ಕರೆಯಲು ನಿರ್ಧರಿಸಲಾಗಿರುವ ಎತ್ತಿನಹೊಳೆ ಯೋಜನೆ ಕುರಿತ ಸಭೆಯನ್ನು ಮಂಗಳೂರಿನಲ್ಲೇ ನಡೆಸಬೇಕು ಮೊದಲಾದ ಬೇಡಿಕೆಗಳನ್ನು ಸರಕಾರ ಈಡೇರಿಸದಿದ್ದರೆ ಐತಿಹಾಸಿಕ ಕರಾವಳಿ ಚಳವಳಿ ಎದುರಿಸಲು ಸರಕಾರ ಸಿದ್ಧವಾಗಲಿ.
ಇದು ಕರಾವಳಿ ಜೀವನದಿ ನೇತ್ರಾವತಿ ರಕ್ಷಣಾ ಸಮಿತಿ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ಬಗ್ಗೆ ನಗರದ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಸಮುದಾಯ, ಸಂಘಟನೆಗಳ ಮುಖಂಡರ ಸಭೆಯಲ್ಲಿ ತೆಗೆದುಕೊಳ್ಳಲಾದ ಎಚ್ಚರಿಕೆಯ ನಿರ್ಣಯಗಳಾಗಿವೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಎನ್ಐಟಿಕೆ ಪ್ರೊಫೆಸರ್ ಎಸ್.ಜಿ.ಮಯ್ಯ, ಪಶ್ಚಿಮವಾಹಿನಿ ಯೋಜನೆಯನ್ನು ಪ್ರಚಾರ ಮಾಡುವ ಮೂಲಕ ಎತ್ತಿನಹೊಳೆ ಯೋಜನೆಯ ವಿರುದ್ಧದ ಹೋರಾಟವನ್ನು ದಾರಿ ತಪ್ಪಿಸುವ ತಂತ್ರ ನಡೆಯುತ್ತಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಈವ ರೆಗೆ ವೈಜ್ಞಾನಿಕ ಅಧ್ಯಯನ ಆಗಿಲ್ಲ. ಪಶ್ಚಿಮ ವಾಹಿನಿ ಯೋಜನೆ ಮಾಡಲಿ, ಮಾಡದಿರಲಿ ನಮ್ಮ ನೀರಿನ ಹಕ್ಕನ್ನು ನಾವು ಬಿಡಬಾರದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆ ಸಾಧ್ಯತಾ ವರದಿ ಇಲ್ಲದೆ ತಯಾರಿಸಲಾದ ಡಿಪಿಆರ್ ಕೆಟ್ಟದಾಗಿದೆ. ಇಂತಹ ಡಿಪಿಆರ್ ಸರಕಾರ ಸ್ವೀಕರಿಸಿರುವುದು ಆಶ್ಚರ್ಯ. ಯೋಜನೆಗೆ ಮಳೆಗಾಲದಲ್ಲಿ ನೇತ್ರಾವತಿ ನದಿಯಲ್ಲಿ ಹರಿಯುವ ಹೆಚ್ಚುವರಿ ನೀರನ್ನು, ಪ್ರವಾಹದ ನೀರನ್ನು ಬಳಸಲಾಗುತ್ತದೆ ಎನ್ನುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತದೆ.
ಈ ಯೋಜನೆ ನೇತ್ರಾವತಿ ನದಿ ನೀರಿಗೆ ಸಂಬಂಧಪಟ್ಟ ಯೋಜನೆಯೆಂದು ಹೇಳಲು ತಯಾರಿಲ್ಲ. ಆದರೆ ಎತ್ತಿನಹೊಳೆ ಯೋಜನೆ ಆರಂಭವಾಗುತ್ತಿರುವುದು ನೇತ್ರಾವತಿ ನದಿಯ ಆರಂಭದಲ್ಲಿ. ಬೇರೆ ಬೇರೆ ಭಾಗಗಳಲ್ಲಿ ನದಿಗೆ ಇರುವ ಹಲವು ಹೆಸರುಗಳನ್ನು ದುರುಪಯೋಗ ಮಾಡಿಕೊಂಡು ಎತ್ತಿನಹೊಳೆ ಯೋಜನೆ ಎಂದು ಬಿಂಬಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಂಘಟಕರಾದ ಎಂ.ಜಿ. ಹೆಗ್ಡೆ, ಪಿ.ವಿ.ಮೋಹನ್, ವಿವಿಧ ಸಮುದಾಯ ಸಂಘಟನೆಗಳ ಮುಖಂಡರಾದ ಮಾಲಾಡಿ ಅಜಿತ್ಕುಮಾರ್ ರೈ, ಮೋಹನ್ ದಾಸ್, ಪ್ರಭಾಕರ ಬಂಗೇರ, ಕೇಶವ, ರಘುವೀರ್, ಲ್ಯಾನ್ಸಿ, ವಾಸುದೇವ ಬೋಳೂರು, ಎಂ. ದೇವದಾಸ್, ಸದಾಶಿವ ಪಡುಬಿದ್ರೆ, ಜಿ.ಕೆ.ಭಟ್, ಡಾ.ಎಚ್ಎಂ.ವಾಸನ್, ರೆ. ಫಾ. ಜೆ.ಸಿ.ಕ್ರಾಸ್ತ, ರಾಜೀವ್ ಅಂಚನ್, ಪ್ರಶಾಂತ ಜತ್ತನ್ನ, ಕೆ.ಉಮೇಶ್ ರೈ, ಮೋಹನ್ ಬೆಂಗರೆ, ಕಮಲಾಕ್ಷ ಬಜಾಲ್, ಹಮೀದ್ ಕುದ್ರೋಳಿ, ಮುಹ್ಮುದ್ ಹನೀಫ್, ಪ್ರಶಾಂತ್ ಶೆಟ್ಟಿ, ಡಿ.ಎಂ. ಕುಲಾಲ್ ಸಹಿತ ವಿವಿಧ ಸಮುದಾಯದ, ಸಂಘಟನೆಯ ಮುಖಂಡರು ಭಾಗವಹಿಸಿ ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟಕ್ಕೆ ಬೆಂಬಲ ಸೂಚಿಸಿದರು.



