ಬೆಂಗಳೂರು, ಸೆ.25: ಜಾಲಿ ರೈಡ್ಗೆ ಒಪ್ಪದ ಪತಿಯ ವರ್ತನೆಯಿಂದ ನೊಂದ ಪತ್ನಿ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರ ನಿವಾಸಿ ವಿಜಯಲಕ್ಷ್ಮಿ(23) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬ್ಯಾಟರಾಯನಪುರ ನಿವಾಸಿ ನಾರಾಯಣರೆಡ್ಡಿ ಎಂಬುವವರೊಂದಿಗೆ 5 ವರ್ಷದ ಹಿಂದಷ್ಟೇ ವಿಜಯಲಕ್ಷ್ಮಿ ವಿವಾಹವಾಗಿದ್ದರು. ನಾರಾಯಣ ರೆಡ್ಡಿ ಲಾರಿ ಮಾಲಿಕರಾಗಿದ್ದು, ವಿಜಯಲಕ್ಷ್ಮಿ ಆಸ್ಪತ್ರೆಯೊಂದರಲ್ಲಿ ಸ್ವಾಗತಕಾರಣಿಯಾಗಿ ನೌಕರಿ ನಿರ್ವಹಿಸುತ್ತಿದ್ದರು. ಅನ್ಯೋನ್ಯವಾಗಿಯೇ ಇದ್ದ ಈ ದಂಪತಿಗೆ ಒಂದು ಮಗುವಿದೆ.
ವಿಜಯಲಕ್ಷ್ಮಿಯ ಹುಟ್ಟುಹಬ್ಬದ ಅಂಗವಾಗಿ ರಾತ್ರಿ ಮನೆಯಲ್ಲಿ ಪಾರ್ಟಿ ಮಾಡಿದ್ದು, ಸ್ನೇಹಿತರೊಂದಿಗೆ ದಂಪತಿಗಳೂ ಸಹ ಮದ್ಯ ಸೇವಿಸಿದ್ದರು ಎನ್ನಲಾಗಿದ್ದು, ಎಲ್ಲರೊಂದಿಗೆ ಬೆರೆತು ಊಟ ಮಾಡಿದ್ದಾರೆ. ಸ್ನೇಹಿತರೆಲ್ಲಾ ಹುಟ್ಟುಹಬ್ಬ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಿದ್ದಾರೆ. ಇತ್ತ ವಿಜಯಲಕ್ಷ್ಮಿ ಜಾಲಿರೈಡ್ಗೆ ಹೋಗೋಣವೆಂದು ಪತಿಗೆ ಕೇಳಿದ್ದಾಳೆ. ಮದ್ಯ ಸೇವಿಸಿರುವುದರಿಂದ ಜಾಲಿರೈಡ್ ಬೇಡವೆಂದು ಪತ್ನಿಗೆ ಮನವರಿಕೆ ಮಾಡಿ, ನಾನು ಬೈಕ್ ಇನ್ಸೂರೆನ್ಸ್ ಕಟ್ಟಿಲ್ಲ, ಪೊಲೀಸರು ರಾತ್ರಿ ವೇಳೆ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಅಲ್ಲದೆ ಮದ್ಯ ವಿಸಿರುವುದರಿಂದ ಇಂದು ಜಾಲಿರೈಡ್ ಬೇಡವೆಂದು ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ವಿಜಯಲಕ್ಷ್ಮಿ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ. ಕೆಲ ಸಮಯದ ಬಳಿಕ ನಾರಾಯಣ ರೆಡ್ಡಿ ಬಾಗಿಲು ತೆಗೆಯುವಂತೆ ಕೇಳಿದರೂ ತೆಗೆಯದ ಕಾರಣ ಕೋಪ ಮಾಡಿಕೊಂಡು ಮಲಗಿರಬಹುದೆಂದು ತಿಳಿದು ನಾರಾಯಣ ರೆಡ್ಡಿ ಹಾಲ್ನಲ್ಲಿ ರಾತ್ರಿ ನಿದ್ರೆಗೆ ಜಾರಿದ್ದಾರೆ. ಬೆಳಗ್ಗೆ ಎಂದಿನಂತೆ ನಾರಾಯಣ ರೆಡ್ಡಿ ಎದ್ದಾಗ ಪತ್ನಿ ವಿಜಯಲಕ್ಷ್ಮಿ ಇನ್ನೂ ಮಲಗಿರಬಹುದೆಂದು ತಿಳಿದು ಕೆಲಸದ ನಿಮಿತ್ತ ಹೊರಗೆ ತೆರಳಿದ್ದಾರೆ. ಕೆಲ ಸಮಯದ ಬಳಿಕ ನಾರಾಯಣರೆಡ್ಡಿ ಮನೆಗೆ ಬಂದಾಗ ಪತ್ನಿ ಹಾಕಿಕೊಂಡಿದ್ದ ಬಾಗಿಲು ಮುಚ್ಚಿರುವುದನ್ನು ಗಮನಿಸಿ ತೆಗೆಯುವಂತೆ ಬಾಗಿಲು ಬಡಿದಿದ್ದಾರೆ. ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಭಯಗೊಂಡ ಆತ ಸಮೀಪದಲ್ಲೇ ಇರುವ ಯುವತಿಯ ಪೋಷಕರಿಗೆ ತಿಳಿಸಿದ್ದಾರೆ.
ಪೋಷಕರು ಮನೆಗೆ ಬಂದು ಬಾಗಿಲು ಬಡಿದರೂ ತೆಗೆಯದ ಕಾರಣ ಬಾಗಿಲು ಒಡೆದು ನೋಡಿದಾಗ ಅಲ್ಲಿ ಕಂಡುಬಂದಿದ್ದು ವಿಜಯಲಕ್ಷ್ಮಿ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು. ರಕ್ತದ ಮಡುವಿನಲ್ಲಿ ಮಗಳು ಸಾವನ್ನಪ್ಪಿರುವುದು ಕಂಡು ಅತ್ತ ಪೋಷಕರ ರೋಧನ ಮುಗಿಲು ಮುಟ್ಟಿದ್ದರೆ ಇತ್ತ ಪತಿಯ ರೋಧನ ಕಂಡು ನೆರೆಹೊರೆಯವರ ಕಣ್ಣಾಲೆಗಳೂ ಸಹ ಒದ್ದೆಯಾದವು. ಆತ್ಮಹತ್ಯೆಗೂ ಮುನ್ನ ವಿಜಯಲಕ್ಷ್ಮಿ ಪತಿ ಮೊಬೈಲ್ಗೆ ಎಸ್ಎಂಎಸ್ ಕಳುಹಿಸಿದ್ದು, ಅದರಲ್ಲಿರುವ ಸಂದೇಶ ಬಹಿರಂಗವಾಗಿಲ್ಲ. ಸುದ್ದಿ ತಿಳಿದು ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿ ಶವವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
