ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆ ಕುರಿತ ಸತ್ಯಾಂಶ ಹೊರ ಬರಬೇಕು : ಹಗರಣದ ವಿರುದ್ಧ ಸಿಐಡಿ ತನಿಖೆಗೆ ಪೂಜಾರಿ ಆಗ್ರಹ

Pinterest LinkedIn Tumblr

Poojary_Press_Meet_1

ಮಂಗಳೂರು, ಸೆ.22: ಎತ್ತಿನಹೊಳೆ ಯೋಜನೆ ಒಂದು ದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಸಿಐಡಿ ತನಿಖೆಗೊಳಪಡಿಸಬೇಕು. ಸಮಗ್ರ ತನಿಖೆಯ ಮೂಲಕ ಸತ್ಯಾಂಶ ಜನರ ಮುಂದೆ ಬರಲಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಸಂಬಂಧಿಸಿ ಕೆಲವು ಮಂದಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಪ್ಪು ಮಾರ್ಗದರ್ಶನ ನೀಡಿ ಅವರನ್ನು ಕತ್ತಲಲ್ಲಿಡುವ ಪ್ರಯತ್ನ ನಡೆಸುತ್ತಿದ್ದಾರೆ. ಸರಕಾರವನ್ನು ಅಸ್ಥಿರಗೊಳಿಸುವ ಒಳಸಂಚು ಕೂಡ ಇದರಲ್ಲಡಗಿದೆ ಎಂದು ಆರೋಪಿಸಿದರು. ಎತ್ತಿನಹೊಳೆ ಯೋಜನೆ ವಿರುದ್ಧ ತಮ್ಮ ಹೋರಾಟದ ಧ್ವನಿ ನಿಲ್ಲಿಸುವುದಿಲ್ಲ ಎಂದವರು ತಿಳಿಸಿದರು.

Poojary_Press_Meet_2

ಮುಖ್ಯಮಂತ್ರಿಗಳೇ, ಎತ್ತಿನ ಹೊಳೆಯಲ್ಲಿ 24 ಟಿಎಂಸಿ ನೀರು ಇಲ್ಲ. ಪರಿಸರ ತಜ್ಞರಾದ ಟಿ.ವಿ. ರಾಮಚಂದ್ರನ್‌, ವಿನಯ, ಭರತ್‌ ಎಂಬ ಮೂವರು ವಿಜ್ಞಾನಿಗಳು ಸ್ಥಳ ಪರಿಶೀಲನೆ ಮಾಡಿ ಇಲ್ಲಿ 9.7 ಟಿಎಂಸಿ ನೀರು ಮಾತ್ರ ಸಿಗುತ್ತದೆ ಎಂಬದಾಗಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅದರಲ್ಲಿಯೂ 5.84 ಟಿಎಂಸಿ ನೀರನ್ನು ಸ್ಥಳೀಯರು ಈಗ ಬಳಕೆ ಮಾಡುತ್ತಿದ್ದಾರೆ. ಇನ್ನುಳಿದ 2.84 ಟಿಎಂಸಿ ನೀರು ಹರಿದು ಪೋಲಾಗುತ್ತಿದೆ. ಮಿಕ್ಕುಳಿಯುವುದು 0.85 ಟಿಎಂಸಿ ನೀರು ಮಾತ್ರ ಎಂದು ಜನಾರ್ದನ ಪೂಜಾರಿ ತಿಳಿಸಿದರು.

ಕೇವಲ 1 ಟಿಎಂಸಿ ನೀರಿಗಾಗಿ ಈಗಾಗಲೇ 1142 ಕೋಟಿ ರೂ. ಖರ್ಚಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದ ಅವರು, ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಗಮನಿಸದೆ ಈ ಯೋಜನೆಗೆ ಅನುಮತಿ ಕೊಟ್ಟದ್ದು ಹೇಗೆ ಎಂದು ಮಾಜಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

Poojary_Press_Meet_3

20 ಕೋಟಿ ರೂ.ಗಿಂತ ಅಧಿಕ ವೆಚ್ಚದ ಕಾಮಗಾರಿಯನ್ನು ಜಾಗತಿಕ ಟೆಂಡರ್ ಮೂಲಕ ನಿರ್ವಹಿಸಬೇಕು. ಆದರೆ ಈ ಯೋಜನೆಯನ್ನು ಮೇಘನಾ ಕನ್‌ಸ್ಟ್ರಕ್ಷನ್‌ನ ಪಾಲುದಾರ ಕಪಿಲ್ ಮೋಹನ್ ಎಂಬ ಭ್ರಷ್ಟ ಐಎಎಸ್ ಅಧಿಕಾರಿ ಕೈಯಲ್ಲಿ ನೀಡಿರುವುದರಲ್ಲೇ ದೊಡ್ಡ ಹಗರಣವಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ರಾಮಚಂದ್ರನ್ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಪೂಜಾರಿ, ಎತ್ತಿನಹೊಳೆ ಯೋಜನೆಯಿಂದ ಸಿಗುವುದು ಬರೀ 0.85 ಟಿಎಂಸಿ ನೀರು ಎಂದು ಸ್ಪಷ್ಟವಾಗಿದೆ.

ಹೀಗಿರುವಾಗ ಕೇವಲ ಒಂದು ಟಿಎಂಸಿಗೂ ಕಡಿಮೆ ನೀರಿನ ಯೋಜನೆಗಾಗಿ 13,000 ಕೋ.ರೂ.ನ್ನು ವ್ಯಯಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು. ಈ ಯೋಜನೆಯ ವಿರುದ್ಧ ಚೆನ್ನೈನ ಗ್ರೀನ್‌ ಟ್ರಿಬ್ಯೂನಲ್‌ಗೆ ಸರಕಾರ ಮತ್ತು ಆಸಕ್ತ ಎಲ್ಲರೂ ಅಫಿದವಿತ್‌ ಸಲ್ಲಿಸಬೇಕೆಂದು ಪೂಜಾರಿ ಸಲಹೆ ಮಾಡಿದರು.

ಎತ್ತಿನಹೊಳೆ ಯೋಜನೆ ವಿಷಯದಲ್ಲಿ ನಾನು ಮೊಯ್ಲಿ ಜತೆ ಅಸ್ತಿತ್ವ ಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂಬ ಕೀಳುಮಟ್ಟದ ಆರೋಪವನ್ನು ಸದಾನಂದ ಗೌಡರು ಮಾಡಿದ್ದಾರೆ. ಸತ್ಯ ಹೇಳುವುದೂ ತಪ್ಪೇ?. ನಾನು ಹೋರಾಟ ಮಾಡುತ್ತಿರುವುದು ದ.ಕ. ಜಿಲ್ಲೆಯ ಜನರ ಅಸ್ತಿತ್ವಕ್ಕಾಗಿ’’ ಎಂದವರು ಡಿವಿ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಮುದ್ರ ಮಟ್ಟದಿಂದ 1,000 ಅಡಿ ಎತ್ತರದಲ್ಲಿರುವ ಎತ್ತಿನಹೊಳೆಯಿಂದ ನೇತ್ರಾವತಿ ನದಿಗೆ ತೊಂದರೆ ಆಗಲಾರದು ಎಂಬ ಡಿವಿಎಸ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ “”ಶಹಬ್ಬಾಸ್‌… ಅವರು ಕೇಂದ್ರ ಸಚಿವರಾಗಿರುವುದಕ್ಕೆ ಸಾರ್ಥಕ” ಎಂದರು.

ಸಚಿವ ಯು.ಟಿ. ಖಾದರ್‌ ಅವರಿಗೂ ಟಾಂಗ್‌ ನೀಡಿದ ಜನಾರ್ದನ ಪೂಜಾರಿ, “ನೀವು ಬಾಯಿಗೆ ಬಂದಂತೆ ನಿಮಿಷಕ್ಕೊಂದು ಮಾತನಾಡುವಿರಿ. ನೀವು ವರದಿ ಓದಿದ್ದೀರಾ’ ಎಂದು ಪ್ರಶ್ನಿಸಿದರು.

ಪೂಜಾರಿ ಅವರು ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಮಾತನಾಡಿ, ಅಮ್ಮಾ ಅವರೇ, ನೀವು ಕರಾವಳಿಯಲ್ಲಿ ಹುಟ್ಟಿದವರಲ್ಲವೇ? ಇಲ್ಲಿನ ನೀರು ಕುಡಿದು ಬೆಳೆದವರಲ್ಲವೇ? ನೀವೇಕೆ ಮಾತನಾಡುತ್ತಿಲ್ಲ ಎಂದು ಪೂಜಾರಿ ಅವರು ಶೋಭಾಗೆ ಪ್ರಶ್ನೆ ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಸುರೇಶ್ ಬಲ್ಲಾಳ್, ಮಹಾಬಲ ಮಾರ್ಲ, ಟಿ.ಕೆ.ಸುಧೀರ್, ವಿಶ್ವಾಸ್ ದಾಸ್, ಅರುಣ್ ಕುವೆಲ್ಲೊ, ನಾಗೇಂದ್ರ ಕುಮಾರ್, ರಮಾನಂದ ಪೂಜಾರಿ, ಕರುಣಾಕರ ಶೆಟ್ಟಿ, ವಾಲ್ಟರ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

Write A Comment