ಉಡುಪಿ: ಡಾ| ಶಿವರಾಮ ಕಾರಂತರು ಬದುಕನ್ನು ತುಂಬಾ ಪ್ರೀತಿಸುತ್ತಿದ್ದರು, ಇದರಿಂದಾಗಿಯೇ ಅವರಿಗೆ ಸಾಧನೆ ಮಾಡುವುದು ಸುಲಭವಾಗಿತ್ತು. ಈ ನಿಟ್ಟಿನಲ್ಲಿ ಇಂದಿನ ನಮ್ಮ ಮಕ್ಕಳಿಗೆ ಬದುಕು ಪ್ರೀತಿಸುವ ಪಾಠವನ್ನು ಕಲಿಸಬೇಕಿದೆ ಅಲ್ಲದೇ ಕೇವಲ ಶಿಕ್ಷಣದ ಕಲಿಕೆಯ ಜೊತೆಗೆ ಉತ್ತಮ ಕಲೆ ಮೊದಲಾದ ಅಭಿರುಚಿಯುಳ್ಳ ಸಾಂಸ್ಕ್ರತಿಕ ರಂಗವನ್ನು ಅವರಿಗೆ ಕಲಿಸಬೇಕೆಂದು ಧರ್ಮಸ್ಥಳದ ಧರ್ಮದರ್ಶಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಅವರು ಶನಿವಾರ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ನಲ್ಲಿ ಕೋಟತಟ್ಟು ಗ್ರಾ.ಪಂ., ಕೋಟ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಆಶ್ರಯದಲ್ಲಿ ಜರಗಿದ ಕಾರಂತ ಕಲಾಕೃತಿ ಹಾಗೂ ಮೆರುಗು ಪರಿಕರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಾರಂತರಿಗೂ ಧರ್ಮಸ್ಥಳಕ್ಕೂ ಸಂಬಂಧವಿದ್ದು, ಸರ್ವಧರ್ಮ ಸಮ್ಮೇಳನದಲ್ಲಿ ಕಾರಂತರು ಪುತ್ತೂರಿನಿಂದ ಬಂದು ಸಮ್ಮೇಳನದ ಯಶಸ್ವಿಗೆ ದುಡಿಯುತ್ತಿದ್ದರು. ಅವರು ಎಲ್ಲಾ ಕೆಲಸಗಳನ್ನು ಇಷ್ಟಪಟ್ಟು ಮಾಡುತ್ತಿದ್ದು ಸಮಯದ ಸದುಪಯೋಗವನ್ನು ಮಾಡುತ್ತಿದ್ದರು. ಕೆಲವೊಮ್ಮೆ ನಿಷ್ಟೂರವಾದಿಯಾಗಿಯೂ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದು ವಿವಿಧ ರಂಗಗಳಲ್ಲಿ ತನ್ನ ಕೈಯಾಡಿಸಿದ್ದರು ಎಂದರು.
ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಎಚ್. ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆಗೈದರು.
ಈ ಸಂದರ್ಭ ಸಾಲಿಗ್ರಾಮ ಡಾ| ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕಿ ಮಾಲಿನಿ ಮಲ್ಯ ಕಾರಂತ ಸಿರಿ ಮಳಿಗೆ ಉದ್ಘಾಟಿಸಿದರು. ಜಿ.ಪಂ. ಸದಸ್ಯೆ ಸುನೀತಾ ರಾಜಾರಾಮ್, ತಾ.ಪಂ. ಸದಸ್ಯ ಭರತ್ ಕುಮಾರ್ ಶೆಟ್ಟಿ, ರಾಘವೇಂದ್ರ ಕಾಂಚನ್ ಅವರು ಮೆರುಗು ಪರಿಕರಗಳನ್ನು ಉದ್ಘಾಟಿಸಿದರು. ಮೆರುಗು ಪರಿಕರಗಳ ರಚನೆಯ ಉಸ್ತುವಾರಿ ವಹಿಸಿದ ಕೋಟ ಸುಬ್ರಾಯ ಆಚಾರ್ಯ, ನರೇಂದ್ರ ಕುಮಾರ್ ಕೋಟ ಹಾಗೂ ರಾಘವೇಂದ್ರರಾಜ್, ಕಾರ್ತಿಕ್ ರಾಜ್ ಮೊದಲಾದವರನ್ನು ಹೆಗ್ಗಡೆ ಅವರು ಗೌರವಿಸಿದರು.
ಸಾಲಿಗ್ರಾಮ ಪ.ಪಂ. ಅಧ್ಯಕ್ಷ ಸಾಧು ಪಿ., ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾ, ಪಾಂಡೇಶ್ವರ ಗ್ರಾ. ಪಂ.ಅಧ್ಯಕ್ಷ ಗೋವಿಂದ ಪೂಜಾರಿ, ಐರೋಡಿ ಗ್ರಾ.ಪಂ.ಅಧ್ಯಕ್ಷ ಮೋಸೆಸ್ ರೋಡ್ರಿಗಸ್, ಕೋಟತಟ್ಟು ಗ್ರಾ.ಪಂ. ಅಭಿವೃದ್ಧಿ ಅಽಕಾರಿ ಪಾರ್ವತಿ, ಕಾರ್ಯದರ್ಶಿ ಮೀರಾ ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದೇವದಾಸ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಡಾ| ಕಾರಂತ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.


















