ಗಣೇಶ್ ಚತುರ್ಥಿ ಸ್ಪೆಶಲ್ ರಿಪೋರ್ಟ್-1
ಕುಂದಾಪುರ: ಕಡಲನ್ನು ಸೇರುವ ತವಕದಲ್ಲಿ ಹರಿದೋಡುತ್ತಿರುವ ವಾರಾಹಿ ನದಿಯ ಉತ್ತರ ದಂಡೆಯ ಮೇಲೆ ಇರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ೨೦೦೦ಕ್ಕೂ ಅಧಿಕ ವರ್ಷಗಳ ಇತಿಹಾಸ ಇದಕ್ಕಿದೆ. ಪ್ರಾಚೀನ ರಾಜಧಾನಿಯಾಗಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಹಲವು ಧರ್ಮಗಳ ನೆಲೆಯಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯ ಕೇಂದ್ರವಾಗಿ ಮೆರೆದಿದ್ದ ಸ್ಥಳವಿದು. ಈಗ ಇತಿಹಾಸವನ್ನು ತನ್ನ ಗರ್ಭದಲ್ಲಿಟ್ಟುಕೊಂಡು ಪೇಟೆಗೆ ಸಮೀಪವಿದ್ದರೂ ಆಲ್ಲಿಯ ಸದ್ದುಗದ್ದಲಗಳಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿರುವ ಒಂದು ಸ್ಥಳ.
ಪ್ರಕೃತಿಯ ಸುಂದರ ಪ್ರಶಾಂತ ಮಡಿಲಿನಲ್ಲಿರುವ ಈ ಊರಿನ ಪ್ರಮುಖ ಆಕರ್ಷಣೆ ಶ್ರೀ ಸಿದ್ದಿವಿನಾಯಕ ದೇವಾಲಯ. ಈ ದೇವಾಲಯ ಇಲ್ಲದೆ ಇದ್ದಿದ್ದರೆ ಪ್ರಾಯಶಃ ಹಟ್ಟಿಯಂಗಡಿ ಮರೆತು ಹೋದ ಊರಿನ ಪಟ್ಟಿಗೆ ಸೇರಿ ಶತಮಾನಗಳೇ ಉರುಳುತಿದ್ದವು. ಸಾವಿರ ವರ್ಷಗಳಿಕ್ಕಿಂತಲೂ ಹಿಂದೆ ಹಟ್ಟಿಯಂಗಡಿಗೆ ಪಟ್ಟಿಯ ನಗರ ಎಂಬ ಹೆಸರಿತ್ತು. ಇದಕ್ಕೆ ಶಾಸನಾಧಾರಗಳಿವೆ. ತುಳುನಾಡನ್ನು ಆಳಿದ ಪ್ರಪ್ರಥಮ ರಾಜವಂಶದ ಅಳುಪ ರಾಜರಲ್ಲಿ ಕೆಲವರು ಪಟ್ಟಿ ಒಡೆಯ, ಪಾಂಡ್ಯ ಪಟ್ಟಿ ಒಡೆಯ. ಪಟ್ಟಿ ಒಡೆಯ ಕುಲಶೇಖರ ಎಂಬ ಹೆಸರನ್ನು ಹೊಂದಿದ್ದು ಅದರಲ್ಲಿ ಪಟ್ಟಿ ಪ್ರಮುಖವಾಗಿ ಕಾಣಿಸಿಕೊಂಡಿತು. ಕ್ರಿ.ಶ. ೮ ನೇ ಶತಮಾನಕ್ಕೆ ಸೇರುವ ಹಟ್ಟಿಯಂಗಡಿಯ ಅತ್ಯಂತ ಪ್ರಾಚೀನ ಶಿಲಾಯುಗದಲ್ಲಿಯು ಈ ಊರನ್ನು ಪಟ್ಟಿ ಎಂದು ಹೆಸರಿಸಲಾಗಿದೆ. ಪ್ರಥಮ ಬಾರಿಗೆ ಈ ಊರನ್ನು ಹಟ್ಟಿಯಂಗಡಿ ಎಂದು ಹೆಸರಿಸುವ ಕ್ರಿ.ಶ. ೧೩೭೭ರ ಶಾಸನವೊಂದು ಇಲ್ಲಿಯ ಶ್ರೀ ಚಂದ್ರನಾಥ ಬಸದಿಯಲ್ಲಿದೆ. ಪಟ್ಟಿ ಆಥವಾ ಹಟ್ಟಿ ಎಂದರೆ ಒಂದು ಕಿರು ಗ್ರಾಮ.
ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ದೇವಾಲಯದಲ್ಲಿನ ಮೂರ್ತಿಯು 2.5 ಅಡಿ ಎತ್ತರವಿದ್ದು, ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ. ಈ ಗಣಪತಿಯ ವಿಗ್ರಹದ ಮತ್ತೊಂದು ವಿಶೇಷವೆಂದರೆ ಇದರ ಜಡೆ ಕೂದಲು ಮತ್ತು ಸೊಂಡಿಲು ಎಡಮುರಿಯಾಗಿದ್ದು ಎಲ್ಲವು ಎಡಕ್ಕೆ ಬಾಗಿದೆ. ಈ ವಿಶೇಷತೆ ಇರುವ ಏಕೈಕ ಗಣಪತಿಯೆಂಬ ಖ್ಯಾತಿಯನ್ನು ಇದು ಪಡೆದಿದೆ. ಕೆಲವರ ನಂಬಿಕೆಯಂತೆ ಈ ಮೂರ್ತಿಯ ಗಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೆ ಇದೆಯಂತೆ. ಈ ನಂಬಿಕೆಗೆ ಇಂಬುಕೊಡುವಂತೆ ಈ ಮೂರ್ತಿಯು ಈಗಾಗಲೇ ತನ್ನ ಬೆಳ್ಳಿಯ ಕವಚಕ್ಕಿಂತ ದೊಡ್ಡದಾಗಿದೆ ಎನ್ನುತ್ತಾರೆ.
ಈ ದೇವಸ್ಥಾನದಲ್ಲಿ ಆಡಳಿತ ಧರ್ಮದರ್ಶಿಗಳಾದ ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಈ ವರ್ಷ ಗಣೇಶ ಚೌತಿಯನ್ನು ಮೂರು ದಿನಗಳ ಕಾಲ ಸಡಗರದಿಂದ ಆಚರಿಸಲಾಗುತ್ತಿದೆ. ಗುರುವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ಸಂಕಲ್ಪ ನಡೆಯಲಿದೆ. ಮಧ್ಯಾಹ್ನ 1008 ತೆಂಗಿನಕಾಯಿ ಮಹಾಗಣಪತಿ ಹವನದ ಪೂರ್ಣಾಹುತಿ ಮಹಾಪೂಜೆ, ಮಹಾ ಸಂತರ್ಪಣೆ ನಡೆಯಲಿದೆ.
(ಸಂಗ್ರಹ ಚಿತ್ರಗಳು)



