ಕನ್ನಡ ವಾರ್ತೆಗಳು

ಐ.ಎಸ್.ಐ.ಎಸ್ ವಿರುದ್ಧ ‘indiaagainstislamicstate.com’ವೆಬ್‌ಸೈಟ್‌ಗೆ ಪ್ರಮೋದ ಮುತಾಲಿಕ್ ಚಾಲನೆ

Pinterest LinkedIn Tumblr

Mutalik_website_relese

ಮಂಗಳೂರು, ಸೆ.14: ಶ್ರೀರಾಮ ಸೇನೆಯು ಐ.ಎಸ್.ಐ.ಎಸ್. (ಇಸ್ಲಾಮಿಕ್ ಸ್ಟೇಟ್ ಫಾರ್ ಇರಾಕ್ ಎಂಡ್ ಸಿರಿಯಾ) ಜಿಹಾದಿ ಸಂಘಟನೆಯ ವಿರುದ್ಧ ನೂತನವಾಗಿ ಆರಂಭಿಸಿರುವ ‘indiaagainstislamicstate.com’ ಹೆಸರಿನ ವೆಬ್‌ಸೈಟ್‌ಗೆ ಸೋಮವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಮುಖಂಡ ಪ್ರಮೋಸ್ ಮುತಾಲಿಕ್ ಚಾಲನೆ ನೀಡಿದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುತಾಲಿಕ್ ಅವರು, ಐ.ಎಸ್.ಐ.ಎಸ್ ಜಿಹಾದಿ ಸಂಘಟನೆಯಲ್ಲಿ ಸೇರ್ಪಡೆಯಾಗಲು ವಿಶ್ವದಾದ್ಯಂತ ಯುವಕರು ಹೋಗುತ್ತಿದ್ದು ಅದರಲ್ಲಿ ಭಾರತದ ಯುವಕರೂ ಇದ್ದಾರೆ ಎಂದು ಬೆಳಕಿಗೆ ಬಂದಿದೆ. ಈ ಸಂಕಟವನ್ನು ಎದುರಿಸಲು ಭಾರತ ಸರಕಾರ ಮತ್ತು ಸೇನಾ ದಳವಂತೂ ಸಿದ್ಧವಿದೆ; ಆದರೆ ಅದಕ್ಕೆ ಸಾಮಾಜಿಕ ಸಹಾಯದ ಆವಶ್ಯಕತೆಯನ್ನು ಗಮನಿಸಿ ಹಾಗೂ ಭಾರತೀಯ ಯುವಕರನ್ನು ಈ ದೃಷ್ಟಿಯಲ್ಲಿ ಜಾಗೃತ ಹಾಗೂ ಸಂಘಟಿತಗೊಳಿಸಲು indiaagainstislamicstate.com ಹೆಸರಿನಲ್ಲಿ ಈ ಜಾಲತಾಣವನ್ನು (ವೆಬ್‌ಸೈಟ್) ಆರಂಭಿಸಿದ್ದೇವೆ ಎಂದರು.

ಇಡೀ ವಿಶ್ವದಲ್ಲಿ ಶ್ರೇಷ್ಠ ಸಂಸ್ಕೃತಿಯ ತೇಜಸ್ವಿ ಪ್ರಕಾಶಕಿರಣವನ್ನು ಹರಡುವ ಭಾರತಕ್ಕೆ ಇಂದು ಜಿಹಾದಿ ಭಯೋತ್ಪಾದಕ ಶಕ್ತಿಯ ಗ್ರಹಣ ಹಿಡಿದಿದೆ ! ಪಾಕ್‌ಪುರಸ್ಕೃತ ಭಯೋತ್ಪಾದನೆ, ಬಾಂಗ್ಲಾದೇಶಿ ನುಸುಳುಕೋರರು, ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಇವೆಲ್ಲಕ್ಕಿಂತಲೂ ಭಯಂಕರವಾದ ಸಂಕಟವು ಇಸ್ಲಾಮಿಕ್ ಸ್ಟೇಟ್ ರೂಪದಲ್ಲಿ ಭಾರತದ ಮುಂದೆ ಎದ್ದು ನಿಂತಿದೆ ! ಐ.ಎಸ್.ಐ.ಎಸ್. (ಇಸ್ಲಾಮಿಕ್ ಸ್ಟೇಟ್ ಫಾರ್ ಇರಾಕ್ ಎಂಡ್ ಸಿರಿಯಾ) ಈ ಜಿಹಾದಿ ಸಂಘಟನೆಯು ಪೂರ್ಣ ವಿಶ್ವದಲ್ಲಿ ಇಸ್ಲಾಮಿ ಆಡಳಿತವನ್ನು ಸ್ಥಾಪಿಸಲು ಯುದ್ಧ ಸಾರಿದೆ.

ನಿರ್ದೋಷಿ ಜನರ ಸಾಮೂಹಿಕ ಹತ್ಯೆ, ಅಪ್ರಾಪ್ತ ಬಾಲಕಿಯರ ಬಲಾತ್ಕಾರ, ಅವರನ್ನು ಸಂತೆಯಲ್ಲಿ ಮಾರಾಟ ಮಾಡುವುದು, ಐತಿಹಾಸಿಕ ಕೊಡುಗೆಗಳನ್ನು ನಾಶಗೊಳಿಸುವುದು ಇತ್ಯಾದಿ ಅಮಾನವೀಯ ಕೃತ್ಯಗಳನ್ನು ಮಾಡುವ ಈ ಸಂಘಟನೆಯ ಪ್ರಸಾರವು ದಿನ-ಪ್ರತಿದಿನ ಹೆಚ್ಚುತ್ತಿದ್ದು ಅದು ಇತ್ತೀಚೆಗಷ್ಟೇ ತಯಾರಿಸಿದ ಇಸ್ಲಾಮಿ ವಿಶ್ವದ ನಕಾಶೆಯನ್ನು ಪ್ರಸಿದ್ಧಪಡಿಸಿದೆ. ಅದರಲ್ಲಿ ಭಾರತವನ್ನೂ ಸೇರಿಸಿ ಅದಕ್ಕೆ ಖುರಾಸಾನ ಪ್ರಾಂತವೆಂದು ಘೋಷಣೆ ಮಾಡಿದೆ.

ಸುಭಾಶ್‌ಚ್ಚಂದ್ರ ಭೋಸ್ ರವರು ಬ್ರಿಟೀಶರಿಗೆ ನಿಮ್ಮ ರಕ್ತ ಕೊಡಿ ನಾವು ನಿಮಗೆ ಸ್ವಾತಂತ್ರ್ಯ ಕೊಡುತ್ತೇವೆ ಎಂದು ಹೇಳಿದ್ದರು ಹಾಗೆಯೇ ಭಾರತದ ಯುವಕರು, ನಾಗರೀಕರು ನಮಗೆ ಸಮಯ ಕೊಡಿ ನಾವು ಭಾರತವನ್ನು ಭಯ ಮುಕ್ತ, ಭಯೋತ್ಪಾದನಾ ಮುಕ್ತ ದೇಶವನ್ನಾಗಿ ಮಾಡುತ್ತೇವೆ ಎಂದು ಕರೆ ನೀಡಿದರು.

ಭಾರತದಲ್ಲಿಯೂ ಐ.ಎಸ್.ಐ.ಎಸ್.ಗೆ ಬೆಂಬಲ ಹೆಚ್ಚುತ್ತಿದ್ದು, ಕಾಶ್ಮೀರದಲ್ಲಿ ಐ.ಎಸ್.ಐ.ಎಸ್.ನ ಧ್ವಜವನ್ನು ಹಾರಿಸಲಾಗುತ್ತಿದೆ, ತಮಿಳುನಾಡಿನಲ್ಲಿ ಕೆಲವು ಯುವಕರು ಐ.ಎಸ್.ಐ.ಎಸ್.ನ ಟೀ-ಶರ್ಟ್ ಧರಿಸಿಕೊಂಡು ಛಾಯಾಚಿತ್ರವನ್ನು ತೆಗೆಸಿಕೊಂಡರು, ಐ.ಎಸ್.ಐ.ಎಸ್.ನ ಟ್ವಿಟರ್ ಖಾತೆಯನ್ನು ನಡೆಸುವ ಮೆಹ್ದಿ ಮಸರೂರನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

ಮುಂಬಯಿಯ ಸಮೀಪದ ಕಲ್ಯಾಣದಲ್ಲಿನ 4 ಯುವಕರು ಹಾಗೂ ಕೇರಳದಲ್ಲಿನ ಒಬ್ಬ ಪತ್ರಕರ್ತ ನೌಕರಿ ಬಿಟ್ಟು ಐ.ಎಸ್.ಐ.ಎಸ್.ಗೆ ಸೇರಿದ್ದಾನೆ, ಇಂತಹ ಅನೇಕ ಘಟನೆಗಳು ಭಾರತದಲ್ಲಿನ ಮುಸಲ್ಮಾನರ ಮೇಲೆ ಐ.ಎಸ್.ಐ.ಎಸ್.ನ ಪ್ರಭಾವವನ್ನು ತೋರಿಸುತ್ತದೆ. ಈ ಜಿಹಾದ್‌ಅನ್ನು ಪ್ರತಿಕಾರ ಮಾಡುವ ಮಾನಸಿಕತೆ ಭಾರತದಲ್ಲಿನ ಯುವಕರಲ್ಲಿ ನಿರ್ಮಾಣ ಮಾಡಲು ಇಂಡಿಯಾ ಎಗೈನ್‌ಸ್ಟ್ ಇಸ್ಲಾಮಿಕ್ ಸ್ಟೇಟ್ ಹೆಸರಿನಲ್ಲಿ ರಾಷ್ಟ್ರಜಾಗೃತಿ ಆಂದೋಲನವನ್ನು ಆರಂಭಿಸಲು ನಿರ್ಣಯಿಸಲಾಗಿದೆ. ಇದರ ಮೊದಲ ಹಂತವಾಗಿ ಈ ‘indiaagainstislamicstate.com’ ಜಾಲತಾಣದ ಮೂಲಕ ಕೃತಿಯನ್ನು ಆರಂಭಿಸುತ್ತಿದ್ದೇವೆ ಎಂದು ಮುತಾಲಿಕ್ ವಿವರಿಸಿದರು.

ಭಾರತಭೂಮಿಯಲ್ಲಿ ಪ್ರಜ್ವಲಿಸುತ್ತಿರುವ ಸಂಸ್ಕೃತಿಯ ನಂದಾದೀಪವನ್ನು ನಿರಂತರವಾಗಿ ಬೆಳಗಿಸುವ ಹೊಣೆ ನಮ್ಮೆಲ್ಲರದ್ದಾಗಿದೆ. ಆದ್ದರಿಂದ ಇಂಡಿಯಾ ಎಗೈನ್‌ಸ್ಟ್ ಇಸ್ಲಾಮಿಕ್ ಸ್ಟೇಟ್ ಈ ಚಳುವಳಿಯ ಮಾಧ್ಯಮದಿಂದ ರಾಷ್ಟ್ರರಕ್ಷಣೆಯ ಯಜ್ಞಕುಂಡವನ್ನು ಧಗಧಗಿಸುತ್ತಾ ಇಡಲು ತಮ್ಮೆಲ್ಲರ ಬೆಂಬಲ, ಸಹಕಾರಮತ್ತು ಕೃತಿಶೀಲ ಯೋಗದಾನದ ಅವಶ್ಯಕತೆಯಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರರಾದ ಶ್ರೀ.ಗುರುಪ್ರಸಾದ, ಶ್ರೀರಾಮ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ.ಗಂಗಾಧರ ಕುಲಕರ್ಣಿ, ಶ್ರೀರಾಮ ಸೇನೆಯ ದಕ್ಷಿಣ ಪ್ರಾಂತ ಪ್ರಮುಖರಾದ ಶ್ರೀ.ಮಹೇಶ್ ಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

Write A Comment