ಕನ್ನಡ ವಾರ್ತೆಗಳು

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ 34 ಮಂದಿಯ ಬಂಧನ

Pinterest LinkedIn Tumblr

Jokatte_Protest_Mrpl_2

ಸುರತ್ಕಲ್, ಸೆ.4: ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸದಸ್ಯರಾದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ 11 ಮಹಿಳೆಯರು 23 ಪುರುಷರು ಸೇರಿ ಒಟ್ಟು 34 ಮಂದಿಯನ್ನು ಗುರುವಾರ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಎಂಆರ್‌ಪಿಎಲ್‌ನ ಸೆಝ್ ಕಾಮಗಾರಿಯ ಭಾಗವಾಗಿ ಜೋಕಟ್ಟೆ ಪರಿಸರದಲ್ಲಿ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಮುಂದಾದ ಕಂಪೆನಿಯ ಕ್ರಮವನ್ನು ಖಂಡಿಸಿ ತಡೆಯೊಡ್ಡಿದ ಆರೋಪದ ಮೇಲೆ ಇವರೆನ್ನೆಲ್ಲಾ ಬಂಧಿಸಲಾಗಿದೆ.

ಮುನೀರ್ ಕಾಟಿಪಳ್ಳ, ಜೋಕಟ್ಟೆ ಗ್ರಾಪಂ ಉಪಾಧ್ಯಕ್ಷ ಸೇರಿದಂತೆ ಸುಮಾರು 6 ಮಂದಿಯ ವಿರುದ್ಧ ಸುರತ್ಕಲ್ ಹಾಗೂ ಪಣಂಬೂರು ಠಾಣೆಗಳಲ್ಲಿ ಕೇಸು ದಾಖಲಾಗಿದ್ದು, ಬಂಧಿತರನ್ನು ಸುರತ್ಕಲ್ ಠಾಣೆಯಿಂದ ಪಣಂಬೂರು ಠಾಣೆಗೆ ವರ್ಗಾಯಿಸಲಾಗಿದೆ.

ಜೋಕಟ್ಟೆ ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಸೆಝ್ ಕಾಮಗಾರಿ ನಡೆಸದಿರುವ ಬಗ್ಗೆ ನಿರ್ಣಯ ಕೈಗೊಂಡಿತು. ಆದರೆ ಗುರುವಾರ ಬೆಳಗ್ಗೆ ಸುರತ್ಕಲ್ ಠಾಣಾ ನಿರೀಕ್ಷಕರು, ಪೊಲೀಸರು ಹಾಗೂ ಸೆಝ್‌ನ ನೌಕರರು ಸೇರಿ ಕೊಂಡು ಕಾಮಗಾರಿ ನಡೆಸಲು ಮುಂದಾದಾಗ ಡಿವೈಎಫ್‌ಐ, ಜೋಕಟ್ಟೆ ಹಿತರಕ್ಷಣಾ ಸಮಿತಿ ಹಾಗೂ ನಾಗರಿಕರು ಪೊರಕೆಗಳನ್ನು ಹಿಡಿದು ತಡೆಯೊಡ್ಡಿದರು.

Jokatte_Protest_Mrpl_2

ಈ ಸಂದರ್ಭ ಪೊಲೀಸರೊಂದಿಗೆ ಮಾತಿನ ಚಕಮಕಿ ಹಾಗೂ ವಾಹನಕ್ಕೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದರು. ಈ ವೇಳೆ 11 ಮಹಿಳೆಯರು ಸೇರಿ ಸುಮಾರು 34 ಮಂದಿಯನ್ನು ಪೊಲೀಸರು ಬಂಧಿಸಿದರು. ಈ ಪೈಕಿ 6 ಮಂದಿಯ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸುರತ್ಕಲ್‌ನಿಂದ ಪಣಂಬೂರಿಗೆ ಸಾಗಿಸಲು ಮುಂದಾದರು. ಈ ವೇಳೆ ಪೊಲೀಸರ ಈ ಕ್ರಮವನ್ನು ಖಂಡಿಸಿದ ಪ್ರತಿಭಟನಕಾರರು ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಿ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಡಿವೈಎಫ್‌ಐ ನಗರಾಧ್ಯಕ್ಷ ಇಮ್ತಿಯಾಝ್, ವಿನಾಕಾರಣ ಮುಖಂಡರ ಮೇಲೆ 2 ಪ್ರಕರಣಗಳನ್ನು ದಾಖಲಿಸುವ ಮೂಲಕ ಶೋಷಿತ ಬಡ ವರ್ಗದ ಜನರನ್ನು ದಮನಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲಾಡಳಿತ, ಜನಪ್ರತಿನಿಧಿ ಗಳು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಜೋಕಟ್ಟೆ ಗ್ರಾಪಂನ ನಿರ್ಣಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Jokatte_Protest_Mrpl_3

20 ಮಂದಿ ಪಣಂಬೂರು ಪೊಲೀಸ್ ವಶಕ್ಕೆ

ಎಂಎಸ್‌ಇಝೆಡ್ ಕಾರ್ಖಾನೆಯ ಕಳವಾರು ಗ್ರಾಮದ ಬಳಿ ಹಾದು ಹೋಗುವ ಡಾಮರು ರಸ್ತೆ ಕಾಮಗಾರಿಗೆ ಅಡಚಣೆಯನ್ನುಂಟು ಮಾಡಿದ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ 20 ಮಂದಿಯನ್ನು ಸುರತ್ಕಲ್ ಪೊಲೀಸರಿಂದ ಪಣಂಬೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಸ್ತೆಯಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಕಾಮಗಾರಿಗೆ ಅಡಚಣೆಯನ್ನುಂಟು ಮಾಡಿದ್ದು ಮಾತ್ರವಲ್ಲದೆ, ಜೋಕಟ್ಟೆ ರೈಲ್ವೆ ಬ್ರಿಡ್ಜ್ ಬಳಿ ಪೊಲೀಸರ ವಾಹನವನ್ನು ತಡೆದು ನಿಲ್ಲಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಸಮಿತಿಯ ಮುನೀರ್ ಕಾಟಿಪಳ್ಳ, ಹುಸೈನ್ ಬಿ., ಶಂಸುದ್ದೀನ್, ಹಕೀಂ ನಾರ್ವೆ, ಮಯ್ಯದ್ದಿ ಸಹಿತ ಸುಮಾರು 20 ಮಂದಿಯನ್ನು ಬಂಧಿಸಲಾಗಿದೆ ಎಂದು ಪಣಂಬೂರು ಪೊಲೀಸರು ತಿಳಿಸಿದ್ದಾರೆ.

ಮೂವರಿಗೆ ಮಧ್ಯಾಂತರ ಜಾಮೀನು

ಇದೇ ವೇಳೆ ಪಣಂಬೂರು ಪೊಲೀಸರು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ಪೈಕಿ ನ್ಯಾಯಾಲಯವು ಮುನೀರ್ ಕಾಟಿಪಳ್ಳ ಸಹಿತ ಮೂವರಿಗೆ ಮಧ್ಯಾಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

Write A Comment