ಕನ್ನಡ ವಾರ್ತೆಗಳು

ವಿವಿಯಲ್ಲಿ ಹಿಂದಿ ಎಂ.ಎ. ಪದವಿ ಕೋರ್ಸ್ ಉದ್ಘಾಟನೆ.

Pinterest LinkedIn Tumblr

VV_college_photo_1

ಮಂಗಳೂರು, ಸೆ.03 : ಮಂಗಳೂರು ವಿಶ್ವವಿದ್ಯಾನಿಲಯ ಆರಂಭಿಸಿರುವ ಹಿಂದಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗೆ ಅನುಕೂಲವಾಗುವಂತೆ (Assistant Professor) ಸಹಾಯಕ ಪ್ರಾಧ್ಯಾಪಕಗಳನ್ನು ನೇಮಿಸಲಾಗುವುದು ಎಂದು ಮಂಗಳೂರು ವಿವಿ ಉಪ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬುಧವಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯ ಆರಂಭಿಸಿರುವ ಹಿಂದಿ ಎಂ.ಎ ಪದವಿ ತರಗತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

VV_college_photo_2 VV_college_photo_3 VV_college_photo_4 VV_college_photo_5

ವಿದ್ಯಾರ್ಥಿಗಳು ಹಿಂದಿ ಎಂ.ಎ.ಕೋರ್ಸ್ ನ್ನು ಆಯ್ಕೆ ಮಾಡುವ ಮೂಲಕ ಈ ಪದವಿಯ ಸದುಪಯೋಗ ಪಡೆದುಕೊಳ್ಳಬೇಕು. ವಿಶ್ವವಿದ್ಯಾನಿಲಯಕ್ಕೆ (Assistant Professor)ಗಳನ್ನು ನೇಮಿಸಿಕೊಳ್ಳುವ ಅವಕಾಶವಿದ್ದು, ಅದರಂತೆ ಈಗಾಗಲೇ ಎಂಬಿಎ ವಿಭಾಗಕ್ಕೆ ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಂಶೋಧನೆ ಸೇರಿದಂತೆ ಇನ್ನಿತರ ವಿಷಯಗಳ ಸಮಗ್ರ ಮಾಹಿತಿಯನ್ನು ಆಯ್ಕೆಗೊಳ್ಳುವ ನುರಿತ ಪ್ರೊಫೆಸರ್‌ಗಳು ಒದಗಿಸಲಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಹಿಂದಿ ಸ್ನಾತಕೋತ್ತರ ವಿಭಾಗ ಸೂಕ್ತ ಪ್ರೊಫೆಸರ್ ಹೆಸರನ್ನು ಸೂಚಿಸಿದಲ್ಲಿ ಶೀಘ್ರವೇ ಅವರನ್ನು ಅಡ್ಜಂಕ್ಟ್ ಪ್ರೊಫೆಸರ್ ಆಗಿ ನೇಮಿಸಿಕೊಳ್ಳಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು. ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ವಿಶ್ರಾಂತ ಹಿಂದಿ ಪ್ರಾಧ್ಯಾಪಕ ಪ್ರೊ.ಟಿ.ಆರ್. ಭಟ್ ಹಿಂದಿ ಎಂ.ಎ.ಪದವಿ ತರಗತಿಗೆ ಚಾಲನೆ ನೀಡಿದರು.

ಹಿಂದಿ ಎಂ.ಎ ಇಲ್ಲದೇ ಇದ್ದುದರಿಂದ ವಿದ್ಯಾರ್ಥಿಗಳು ಬೇರೆ ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಖ್ಯಾತ ಸಾಹಿತಿ ಶಿವರಾಮ ಕಾರಂತರಿಗೆ ಕನ್ನಡ ಭಾಷೆಯ ಮೇಲಿದ್ದಷ್ಟೇ ಪ್ರೀತಿ ಹಿಂದಿಯ ಮೇಲೂ ಇತ್ತು. ಅವರೂ ಕೂಡ ಮಂಗಳೂರು ವಿವಿಯಲ್ಲಿ ಹಿಂದಿ ಎಂ.ಎಂ.ಕೋರ್ಸ್ ಆರಂಭಿಸಬೇಕೆಂಬ ಕನಸು ಹೊಂದಿದ್ದರು. ಕೊನೆಗೂ ಆ ಕನಸು ನನಸಾಗಿದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಟಿ.ಆರ್. ಭಟ್ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಮಧ್ಯಪ್ರದೇಶ ಇಂದೋರ್‌ನ ದೇವಿ ಅಹಿಲ್ಯಾ ವಿಶ್ವವಿದ್ಯಾ ನಿಲಯದ ತೌಲನಿಕ ಸಾಹಿತ್ಯ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಬಿ.ವೈ. ಲಲಿತಾಂಬಾ, ಕಾರ್ಪೊರೇಶನ್ ಬ್ಯಾಂಕ್ ಮಂಗಳೂರು ಪ್ರಧಾನ ಕಚೇರಿಯ ಉಪಮಹಾಪ್ರಬಂದಕ ಡಾ.ಜಯಂತಿ ಪ್ರಸಾದ್, ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಸುನಂದಾ ಯು. ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭ ಹಿಂದಿ ಅಧ್ಯಯನ ಮಂಡಳಿಯ ಅಧ್ಯಕ್ಷೆ, ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕಿ ಡಾ.ಶಾರದಾ ಎಂ.ಶಿರ್ವ ಹಾಗೂ ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ನಾಗರತ್ನಾ ಎನ್.ರಾವ್ ಸಂಪಾದಕತ್ವದಲ್ಲಿ ಸಿದ್ಧಪಡಿಸಿರುವ ಹಿಂದಿ ಪ್ರಥಮ ವರ್ಷದ ನಾಲ್ಕು ಪಠ್ಯಪುಸ್ತಕಗಳನ್ನು ಪ್ರೊ.ಕೆ.ಭೈರಪ್ಪ ಬಿಡುಗಡೆಗೊಳಿಸಿದರು.

ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ನಾಗೇಶ್ ಹಿಂದಿ ಭಾಷಾ ಮಹತ್ವದ ಕುರಿತು ಮಾತನಾಡಿದರು. ಡಾ.ನಾಗರತ್ನ್ನಾ ಎನ್.ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಸಿ.ರಾಜೀವ್ ವಂದಿಸಿದರು. ಡಾ.ಸುಮಾ ಕಾರ್ಯಕ್ರಮ ನಿರೂಪಿಸಿದರು.

ರ್ಯಾಂಕ್ ಗಳಿಸಿದವರಿಗೆ ಚಿನ್ನದ ಪದಕ
ಹಿಂದಿ ವಿಭಾಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಿಂದಿ ಪ್ರಾಧ್ಯಾಪಕರು ಮುಂದಾಗಿದ್ದಾರೆ. ಡಾ.ನಾಗರತ್ನ್ನಾ ಎನ್. ರಾವ್ ಹಿಂದಿ ಸ್ನಾತಕೋತ್ತರ ಪದವಿಯಲ್ಲಿ ಪ್ರತಿವರ್ಷ ರ್ಯಾಂಕ್ ಗಳಿಸುವ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲು ನಿರ್ಧರಿಸಿದ್ದು, ಈ ಕುರಿತಂತೆ ಒಂದು ಲಕ್ಷ ರೂ. ಮೊತ್ತದ ಚೆಕ್‌ನ್ನು ಉಪ ಕುಲಪತಿಗೆ ಹಸ್ತಾಂತರಿಸಿದರು. ನಾಗರತ್ನಾ ಅವರು ತನ್ನ ತಂದೆ ಪ್ರೊ.ನಾರಾಯಣ ರಾವ್ ಮಾಳಕೇಡ ಹೆಸರಿನಲ್ಲಿ ಈ ಪದಕವನ್ನು ನೀಡಲಿದ್ದಾರೆ. ಆಳ್ವಾಸ್ ಕಾಲೇಜಿನ ಹಿಂದಿ ಪ್ರಾಧ್ಯಾಪಕ ಡಾ.ರಾಜೀವ್, ದ್ವಿತೀಯ ವರ್ಷದ ಹಿಂದಿ ವಿಶೇಷ ಪಠ್ಯ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ 5 ಸಾವಿರ ರೂ. ನಗದು ನೀಡುವುದಾಗಿ ಘೋಷಿಸಿದರು.

ಹಿಂದಿ ಸಾಹಿತ್ಯ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸುವ ವಿದ್ಯಾರ್ಥಿಗೆ ಡಾ.ಸುಮಾ ಟಿ.ಆರ್. ತಮ್ಮ ತಂದೆ ಕ್ಯಾ.ತುಕಾರಾಮ್ ಜಿ. ಹೆಸರಿನಲ್ಲಿ 5 ಸಾವಿರ ರೂ. ನೀಡಲು ನಿರ್ಧರಿಸಿದ್ದಾರೆ.

Write A Comment