ಕನ್ನಡ ವಾರ್ತೆಗಳು

ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯ ಅಭಿಯಾನಕ್ಕೆ ಚಾಲನೆ.

Pinterest LinkedIn Tumblr

Saskha_ratha_low_1

ಮಂಗಳೂರು : ದ.ಕ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯ ಅಭಿಯಾನಕ್ಕೆ ಸೋಮವಾರ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬೈಲೂರು ಶಂಕರರಾಮ ಅವರು ಚಾಲನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕರೆ ಹಾಗೂ ಎಸ್ಸೆಮ್ಮೆಸ್ ಮೂಲಕ ಪ್ರಲೋಭನೆ, ವಂಚನಾ ಜಾಲಕ್ಕೆ ಸಿಲುಕುತ್ತಿರುವ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಕಾನೂನಲ್ಲಿ ತಿದ್ದುಪಡಿಯ ಅಗತ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ದ.ಕ.ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸೈಬರ್ ಕ್ರೈಂ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಾನೂನಿನ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಅರಿವು ಮೂಡುವ ಅಗತ್ಯವಿದೆ. ಕಾನೂನಿನ ಅರಿವಿದ್ದಾಗ ನ್ಯಾಯಾಲಯದ ಮೆಟ್ಟಿಲೇರುವ ಪ್ರಮೇಯವೇ ಬರುವುದಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಹೊಸ ಕಾನೂನುಗಳು ಹಳೆ ಕಾನೂನಿಗೆ ತಿದ್ದುಪಡಿಯೊಂದಿಗೆ ಅನುಷ್ಠಾನಗೊಳ್ಳುತ್ತಿದ್ದು, ಇದನ್ನು ಜನರಿಗೆ ತಿಳಿಸುವುದು ಈ ಕಾನೂನು ರಥದ ಉದ್ದೇಶ. ರಥವು ಈಗಾಗಲೇ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕು ಗಳಲ್ಲಿ ಸಂಚರಿಸಿ ಪ್ರಸ್ತುತ ಸೆಪ್ಟಂಬರ್ 3ರವರೆಗೆ ಮಂಗಳೂರು ನಗರ ಹಾಗೂ ತಾಲೂಕಿನಾದ್ಯಂತ ಸಂಚರಿಸಲಿದೆ ಎಂದು ಅವರು ಹೇಳಿದರು.

Saskha_ratha_low_2 Saskha_ratha_low_3 Saskha_ratha_low_5 Saskha_ratha_low_7 Saskha_ratha_low_8

ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ಮಾತನಾಡಿ, ದಕ್ಷಿಣಕನ್ನಡ ಜಿಲ್ಲೆಯ ಜನತೆ ವಿದ್ಯಾವಂತರು ಮತ್ತು ತಿಳುವಳಿಕೆ ಇರುವವರು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವುದೇ ಅದರ ಅನುಷ್ಠಾನ ಎಂದು ತಿಳಿದ ಜನರೂ ಇದ್ದಾರೆ. ಕಾನೂನು ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ಬಗೆಹರಿಸುವ ಬದಲು ಬೀದಿಗಳಲ್ಲೇ ಪರಿಹರಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸ ಅತೀ ಮುಖ್ಯ ಎಂದು ಹೇಳಿದರು.

ದ.ಕ. ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಸಂಚರಿಸಿರುವ ಕಾನೂನು ರಥದಲ್ಲಿನ ಜನತಾ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳನ್ನು ಬಗೆಹರಿಸಲಾಗಿದೆ. ಸುಳ್ಯದಲ್ಲಿ 1 ಸಿವಿಲ್ ಪ್ರಕರಣ ಮತ್ತು 5 ಕ್ರಿಮಿನಲ್ ಪ್ರಕರಣ, ಪುತ್ತೂರಿನಲ್ಲಿ 3 ಸಿವಿಲ್ ಮತ್ತು 5 ಕ್ರಿಮಿನಲ್, ಬಂಟ್ವಾಳದಲ್ಲಿ 3 ಸಿವಿಲ್ ಮತ್ತು ಒಂದು ಕ್ರಿಮಿನಲ್, ಬೆಳ್ತಂಗಡಿಯಲ್ಲಿ 1 ಸಿವಿಲ್ ಮತ್ತು 3 ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಪುತ್ತೂರಿನಲ್ಲಿ 6 ಮೋಟಾರು ವಾಹನ ಪ್ರಕರಣ ವಿಲೇವಾರಿ ಮಾಡಲಾಗಿದ್ದು, 4.85 ಲಕ್ಷ ರೂ. ಪರಿಹಾರವನ್ನೂ ನೀಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಗಣೇಶ್ ಮಾಹಿತಿ ನೀಡಿದರು.

ಜನವರಿಯಿಂದ ಆಗಸ್ಟ್ 15ರವರೆಗೆ ಮಾಸಿಕ ಜನತಾ ನ್ಯಾಯಾಲಯದಲ್ಲಿ ಒಟ್ಟು 61,618 ಪ್ರಕರಣಗಳಲ್ಲಿ 56,228 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. 1,042 ಸಿವಿಲ್ ಪ್ರಕರಣಗಳು ಹಾಗೂ 4,348 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅವರು ತಿಳಿಸಿದರು.

ಪೊಕ್ಸೊ-ದಲಿತ ದೌರ್ಜನ್ಯ ಕಾಯ್ದೆಯ ಬಗ್ಗೆ ಅರಿವು ಅಗತ್ಯ ಕಾನೂನಿನಲ್ಲಾಗುವ ಬದಲಾವಣೆ ಹಾಗೂ ಹೊಸ ಕಾನೂನುಗಳ ಕುರಿತಂತೆ ಜನರಿಗೆ ಮಾಹಿತಿ ನೀಡುವುದು ಅತೀ ಅಗತ್ಯ. ಪೊಕ್ಸೊ ಮತ್ತು ದಲಿತ ದೌರ್ಜನ್ಯ ಕಾಯ್ದೆ ಕುರಿತು ಜನರಿಗೆ ಸಾಕಷ್ಟು ಗೊಂದಲಗಳಿರುವುದು ತನಿಖೆಯ ಸಂದರ್ಭ ಮನವರಿಕೆಯಾಗುತ್ತಿದೆ. ಈ ಕಾನೂನುಗಳ ಬಗ್ಗೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಸ್. ಪಿ.ಚೆಂಗಪ್ಪ, ಆಕಾಶವಾಣಿ ಸಹಾಯಕ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶಕ ಸುಂದರ ಪೂಜಾರಿ, ವಾರ್ತಾಧಿಕಾರಿ ಖಾದರ್ ಶಾ, ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ನಿಕೇಶ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

Write A Comment